Cover

ಆರಂಭಕ್ಕೆ ಮುನ್ನ......

ಆರಂಭಕ್ಕೆ ಮುನ್ನ......

                ಏಪ್ರಿಲ್ ತಿಂಗಳ ಒಂದು ದಿನ. ಬೆಳಿಗ್ಗೆ ಇದ್ದಕ್ಕಿದ್ದಂತೆ ನನ್ನ ಹೈಸ್ಕೂಲು ದಿನಗಳು ನೆನಪಾದವು. ಕೇವಲ ಹತ್ತೇ ನಿಮಿಷದಲ್ಲಿ ಹಲವಾರು ಘಟನೆಗಳು ತಲೆಯಲ್ಲಿ ಮೆರವಣಿಗೆ ನಡೆಸಿದವು. ಒಂದೊಂದು ಘಟನೆಗೂ ಒಂದೊಂದು ತಲೆಬರಹ ತನ್ನಿಂದತಾನೇ ಮೂಡಿಬಂದವು. ಇವನ್ನೆಲ್ಲ ಬರೆದಿಟ್ಟರೆ ಹೇಗೆ? ಎಂಬ ಚಿಂತನೆ ಬಂದಿದ್ದೇ ತಡ... ನೇರವಾಗಿ ಕಂಪ್ಯೂಟರ್‌ನಲ್ಲಿ ಬರೆಯುತ್ತಾ ಹೋದೆ. ಕೇವಲ ಐದೇ ದಿನಗಳಲ್ಲಿ ಬರೆದು ಮುಗಿಸಿದ್ದೆ. ಪಿಹೆಚ್.ಡಿ. ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ನನ್ನ ಸೃಜನಶೀಲ ಬರವಣಿಗೆ ನಿಂತೇ ಹೋಗಿತ್ತು! ಯಾವ ಪೂರ್ವೋದ್ದೇಶಗಳೂ ಇಲ್ಲದೆ ಈ ಕೃತಿ ರೂಪಗೊಂಡಿದೆ. ಅಷ್ಟರಮಟ್ಟಿಗೆ ಇದು ನಾನು ಬರೆದದ್ದು ಅನ್ನುವುದಕ್ಕಿಂತ ನನ್ನಿಂದ ಬರೆಯಿಸಿಕೊಂಡಿದ್ದು!

‘ಆ ಕಾಲವೊಂದಿತ್ತು’.....

ಸತ್ಯ ಘಟನೆಗಳನ್ನು ಅನಾವರಣಗೊಳಿಸುವ ಸಂಕಥನವನ್ನು ರಚಿಸುವುದು ಸ್ವಲ್ಪ ಮುಜುಗರದ ಸಂಗತಿಯೇ. ಒಂದು ತೆರನ ಬೆತ್ತಲಾಗುವ ಪ್ರಕ್ರಿಯೆ. ಹಾಗಾಗಿ ಸತ್ಯಗಳನ್ನೆಲ್ಲಾ ಮರೆಮಾಚುತ್ತಾ ಬರೆಯುವ ರೀತಿಗೆ ಒಗ್ಗಿಹೋಗಿದ್ದೇವೆ. ಮಾತ್ರವಲ್ಲದೆ ಇದು ಕಲಾತ್ಮಕತೆ, ಶೈಲಿ ಎಂದು ಏನೆಲ್ಲಾ ಕರೆದುಕೊಂಡಿದ್ದೇವೆ. ಸತ್ಯನಾರಾಯಣ ತಮ್ಮ ಸ್ಮೃತಿಯಲ್ಲಿರುವ ಭೂತದ ನೆನಪುಗಳನ್ನು ಹಾಗೆಯೇ ಕಾಗದದ ಮೇಲೆ ಇಳಿಸಹೊರಟಿದ್ದಾರೆ. ಇದು ನಿಷ್ಠುರಕ್ಕೊಳಗಾಗುವ ಕೆಲಸ ಎಂಬ ಅರಿವು ಅವರಿಗಿದೆ. ಜೀವನದ ಅನೇಕ ಎಡರು-ತೊಡರುಗಳನ್ನು ದಾಟಿ ಗ್ರಂಥಪಾಲಕರ ಹುದ್ದೆಗೆ ಏರಿದ ಸತ್ಯನಾರಾಯಣರ ಬಾಲ್ಯದ ಅನುಭವ ಅನಂತವಾದುದು. ಬಾಲ್ಯ ಕಟ್ಟಿಕೊಡುವ ಇಂತಹ ಅನುಭವದ ಬುತ್ತಿಯ ಎದುರು ಬೇರೇನಿದೆ. ಹಾಗಾಗಿಯೇ ಕುವೆಂಪುರವರು ‘ಆ ಕಾಲವೊಂದಿತ್ತು’ ಎಂದಿರುವುದು. ನಾಲ್ಕು ಗೋಡೆಗಳ ಒಳಗೆ ಬಾಗಿಲು ಹಾಕಿದ ಮನೆಯಲ್ಲಿ ತೆರೆದುಕೊಳ್ಳದೇ ಬೆಳೆಯುವ ಪಟ್ಟಣದ ಮಕ್ಕಳಿಗೆ ಎಲ್ಲಿದೆ ಇಂತಹ ಅನುಭವದ ಬುತ್ತಿ. ಬಾಲ್ಯದ ಬಡತನದ ನೆನಪಲ್ಲದೆ ಹಣದ ಹುಚ್ಚುಹೊಳೆಯಲ್ಲಿ ತೇಲಿಹೋಗುತ್ತಿರುವ ನವಸಮಾಜದ ನಾಗರಿಕನಿಗೆ ಇದು ಏನೂ ಅಲ್ಲ ಎನಿಸಬಹುದು. ಆದರೆ ಸಾಹಿತ್ಯದ ಅಭಿರುಚಿ ಇರುವ ಪ್ರತಿಯೊಬ್ಬ ಓದುಗನಿಗೆ ಓದುಗನಿಗೆ ಹೊಸ ಅನುಭವ ನೀಡುವ ಬರಹ ಇದಾಗಿದೆ.

 

ತನ್ನ ಬದುಕಿನ ಸಂದರ್ಭದಲ್ಲೇ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರಾಗದ ಅಧ್ಯಾಪಕ ಸಮೂಹ ವಿದ್ಯಾರ್ಥಿಗಳ ಬದುಕನ್ನು ಕಟ್ಟಲು ಸಾಧ್ಯವೇ ಎನ್ನುವ ಗುಮಾನಿಯಿಂದಲೇ ಆರಂಭವಾಗುವ ಸತ್ಯನಾರಾಯಣರ ಜೀವಾನಾನುಭದ ಕಥನ ಬಹುಶಃ ಎಲ್ಲಾ ಗ್ರಾಮೀಣ ವಿದ್ಯಾರ್ಥಿಗಳ ಜೀವನ ಕಥನವೇ ಆಘಿದೆ. ಹೆಂಡ, ಜೂಜು ಮೊದಲಾದವುಗಳಲ್ಲಿ ಮುಳುಗಿರುವ ಅಧ್ಯಾಪಕ ಯಾವ ಜೀವನ ಮೂಲ್ಯಗಳನ್ನು ವಿದೈಆರ್ಥಿಗಳಲ್ಲಿ ಹುಟ್ಟುಹಾಕಲು ಸಾಧ್ಯ. ಒಳ್ಳೆಯ ಸಮಾಜವನ್ನು ಕಟ್ಟುವಲ್ಲಿ ತನ್ನ ಪಾತ್ರವಿದೆ ಎನ್ನುವುದನ್ನು ಮರೆತಿರುವ ಬಹುತೇಕ ಅಧ್ಯಾಪಕರು ಬೆಲ್ಲು-ಬಿಲ್ಲಿನ ಅಧ್ಯಾಪಕರೇ ಆಗಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಸತ್ಯನಾರಾಯಣ. ಆದರೆಶ್ರದ್ಧಾಭಕ್ತಿಗಳಿಂದ ತನ್ನ ಕಾಯಕವನ್ನು ನಡೆಸುತ್ತಿದ್ದ ಪ್ರಮಾಣಿಕ ಅಧ್ಯಾಪಕ ವೆಂಕಟಪ್ಪನಂಥವರೂ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ.

 

ಕುಂದೂರುಮಠದ ಹಿನ್ನೆಲೆ ಐತಿಹ್ಯ ಹಾಗೂ ಜಾನಪದ ಆಚರಣೆಗಳ ವಿವರಣೆಗಳು ಅವುಗಳ ಹಿಂದಿನ ರಾಜಕಾರಣ ಬಲಿಷ್ಠ ಜಾತಿಗಳ ಪ್ರಾಬಲ್ಯ ಮೊದಲಾದವುಗಳ ಬಗಗೆ ವಿವರಣೇ ನೀಡುತ್ತಾ ಹೋಗುವ ಸತ್ಯನಾರಾಯಣ ಮತ್ತೆ ತಮ್ಮ ಹೈಸ್ಕೂಲಿನ ಅನುಭವಗಳ ಕಡೆಗೆ ಹೊರಳುತ್ತಾರೆ. ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಶಹಬ್ಬಾಸ್ಗಿರಿ ಪಡೆವ ಅವರು ಟೀ.ಸಿ.ಯ ಹಿಂದೆ ಬರೆದ ಅಂಕಗಳನ್ನು ತಿದ್ದಲು ಹೋಗಿ ಸಿಕ್ಕಿಹಾಕಿಕೊಂಡು ಅನುಭವಿಸಿದ ಅವಾಂತರದ ಚಿತ್ರಣ, ಎಂಟನೇ ತರಗತಿಗೆ ಮಾನಿಟರ್ ಆದದ್ದು, ತರಗತಿ ಮಾನಿಟರ್ ಮಾಡುವುದರ ಜೊತೆಗೆ ವೆಂಕಟಪ್ಪನವರ ಬಹಿರ್ದೆಸೆಗೆ ನೀರನ್ನು ತೆಗೆದುಕೊಂಡು ಹೋಗಿ ಕೊಡಬೇಕಾದ ಪ್ರಸಂಗ, ವೆಂಕಟಪ್ಪನವರ ಪ್ಯಾಂಟಿನಲ್ಲಿ ಇರುವೆ ಸೇರಿದಾಗ ಅವುಗಳನ್ನು ಸಂಹರಿಸಿದ್ದು, ವೆಂಕಟಪ್ಪನವರ ಬಂಧುಗಳು ತೀರಿಕೊಂಡಾಗ ಅವರಿಗೆ ಸೈಕಲ್ಲಿನಲ್ಲಿ ಲಿಫ್ಟ್ ಕೊಟ್ಟಿದ್ದು ಈ ಎಲ್ಲಾ ಸಂದರ್ಭಗಳಲ್ಲಿ ವೆಂಕಟಪ್ಪನವರು ತಮ್ಮನ್ನು ಪ್ರೀತಿಯಿಂದ ನಡೆಸಿಕೊಂಡ ಬಗೆ ಇವುಗಳನ್ನು ವಿವರಿಸುತ್ತಾ ಅವರ ಮಾನವೀಯತೆಯ ಬಗೆಗೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಜೊತೆಗೆ ಅಂತಹ ಮಾನ್ಯರೂ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ ಎಂಬ ಸತ್ಯದ ಅರಿವಾದ ಪ್ರಸಂಗವನ್ನೂ ವಿವರಿಸುತ್ತಾರೆ.

 

ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳಲ್ಲಿ ಸತ್ಯನಾರಾಯಣರಿಗೆ ಮೇಷ್ಟ್ರುಗಳು ಬಹಳ ಕಾಡಿದ್ದಾರೆ. ಹುಣ್ಣಿಮೆ ಅಮಾವಾಸ್ಯೆ ದಿನಗಳಲ್ಲಿ ಮನಸ್ಸಿನ ಸ್ವಾಸ್ಥ್ಯ ಕಳೆದುಕೊಂಡು ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದ ಹಾಗೂ ಇಂಗ್ಲಿಷ್ ಓದಲು ಬರದಿದ್ದರೂ ಪಾಠ ಮಾಡುತ್ತಿದ್ದ ಸಿ.ಓ.ಆರ್.ಪಿ.ರೇಷನ್ ಮೇಷ್ಟ್ರು ಡಿ.ಎಸ್.ನಿಂಗೇಗೌಡ, ವಿದ್ಯಾರ್ಥಿಗಳನ್ನು ಹೊಡೆಯುವುದರಲ್ಲಿ ಹೆಸರುವಾಸಿಯಾಗಿದ್ದ ಮಿಡ್ಲಿಸ್ಕೂಲಿನ ರಾಮೇಗೌಡ, ಮುಂದೆ ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಆಗಿ ಭಂದ ಭೀಮಪ್ಪ ಕರಿಯಪ್ಪ ಮೊದಲಾದವರ ಗುಣಸ್ವಭಾವದ ಚಿತ್ರಣ ಕುತೂಹಲಕಾರಿಯಾದವು. ತನ್ನ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತನ್ನದೇನೂ ಪಾತ್ರವಿಲ್ಲ ಎಂಬಂತೆ ಸ್ವಂತಪುರಾಣವಾಚನಗೋಷ್ಠಿ ನಡೆಸುತ್ತಾ, ಹುಡುಗಿಯರ ಕೈಹಿಡಿದು ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾ ವಿದ್ಯಾರ್ಥಿನಿಯರ ಎದುರು ಲಘುವಾಗಿ ಮಾತನಾಡುತ್ತಾ ತಮ್ಮ ಅವಿವೇಕವನ್ನು ಪ್ರದರ್ಶಿಸುತ್ತಿದ್ದ ಹಾಗೂ ಗೈಡ್ ನೋಡಿ ಪಾಠ ಮಾಡುವ ಮೇಷ್ಟರಿಂದ ಏನನ್ನು ತಾನೆ ನಿರೀಕ್ಷಿಸಲಾದೀತು? ವಿದ್ಯಾರ್ಥಿಗಳು ಮುಂದೊಂದು ದಿನ ತನ್ನ ಅಧ್ಯಾಪಕರನ್ನು ಃಏಗೆ ನೋಡಬಹುದು ಎನ್ನುವುದಕ್ಕೆ ಈ ಚಿತ್ರಣ ಉತ್ತಮ ನಿದರ್ಶನವಾಗಿದೆ. ಅಧ್ಯಾಪಕನ ಬದುಕಿನ ರೀತಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಲ್ಲದು ಎನ್ನುವ ಅರಿವಿಲ್ಲದ ಅಧ್ಯಾಪಕರ ಸಮೂಹವನ್ನು ಇಲ್ಲಿ ನೋಡಬಹುದು. ಸಾಮಾನ್ಯ ಬರಹಗಳಲ್ಲಿ ಅಧ್ಯಾಪಕರಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳಿ ಬರೆಯುವ ರೂಢಿಯಿದೆ. ಆದರೆ ಸತ್ಯನಾರಾಯಣರು ಇನ್ನೊಂದು ಮುಖದ ದರ್ಶನ ಮಾಡಿಸಹೊರಟಿದ್ದಾರೆ.

 

ಮೇಷ್ಟ್ರು ಪುರಾಣದ ಜೊತೆಗೆ ಬಾಲ್ಯದ ಇತರ ಅನುಭಗಳನ್ನು ಸತ್ಯನಾರಾಯಣ ಇಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಟೆಲ್ ಬದುಕಿನ ಚಿತ್ರಣ ಸಿನಿಮಾ ಹುಚ್ಚು, ಬೆಂಕಿದೆವ್ವ, ಕಡ್ಲೆಕಾಯಿ ಕಲ್ಲಂಗಡಿ ಕದ್ದದ್ದು, ಬಾಂಬ್ ಮಾಡಿದ್ದು, ಜಾತ್ರೆಯಲ್ಲಿ ಚಂದಾ ವಸೂಲಿ ಮಾಡಿದ್ದು, ಕದ್ದು ಸಿಗರೇಟು ಸೇದಿದ್ದು, ರಾಜಕೀಯ ಪಕ್ಷದ ರ್‍ಯಾಲಿಗೆ ಲಾರಿ ಪ್ರವಾಸ ಮಾಡಿದ್ದು ಹೊಟೇಲ್ ಮಂಜಣ್ಣನ ಒಡನಾಟ ಹೀಗೆ ಬಾಲ್ಯವನ್ನು ಇವೆಲ್ಲವುದರ ನಡುವೆ ನೆನಪಿಸಿಕೊಳ್ಳುತ್ತಾರೆ. ಹುಡುಗಾಟದ ದಿನಗಳಲ್ಲಿ ತಾನೂ ಭ್ರಷ್ಟನಾದ ಸಾಧ್ಯತೆಗಳನ್ನು ವಿವರಿಸಲು ಹಿಂಜರಿಯುವುದಿಲ್ಲ. ಅಗಾಧವಾದ ಜೀವನಾನುಭವ ಹೇಗೆ ಗಟ್ಟಿಯಾದ ಬದುಕನ್ನು ಕಟ್ಟಿಕೊಡುತ್ತದೆ ಎನ್ನುವುದಕ್ಕೆ ಈ ಸಂಕಥನ ಸಾಕ್ಷಿಯಾಗಿದೆ. ಹೇಳಬೇಕೆನ್ನಿಸಿದ್ದನ್ನು ನೇರವಾಗಿ ಹೇಳಿಯೇ ಬಿಡುವ ಸತ್ಯನಾರಾಯಣರ ಮನೋದಾರ್ಷ್ಟ್ಯ ಅಪರೂಪದ್ದು. ಬರಹಗಾರನ ತುಡಿತವೇ ಅಂತಹದ್ದು. ಕುವೆಂಪು ಹೇಳುವಂತೆ ‘ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು ಹೇಳದಿದ್ದರೆ ತಾಳಲಾರನೋ ಕವಿಯು’

 

ಈ ಸಂಕಥನ ಇಲ್ಲಿಗೇ ನಿಲ್ಲದೇ ಮುಂದಿನ ದಿನಗಳಲ್ಲಿ ಜೀವನಾನುಭವದ ಚಿತ್ರಣಗಳು ಸತ್ಯನಾರಾಯಣರ ಲೇಖನಿಯಿಂದ ಮೂಡಿಬರಲಿ ಎಂದು ಆಶಿಸುತ್ತೇನೆ.

- ಡಾ.ರಮೇಶ್‌ಚಂದ್ರ ದತ್ತ

ನಾನೇಕೆ ನನ್ನ ಹೈಸ್ಕೂಲು ದಿನಗಳ ಬಗ್ಗೆ ಬರೆಯಬೇಕು?

ನನ್ನ ಹೈಸ್ಕೂಲು ಬದುಕಿನ ಮೂರು ವರ್ಷಗಳು, ಇದುವರೆಗಿನ ನನ್ನ ಜೀವಮಾನದಲ್ಲೇ ಅತ್ಯಂತ ಸ್ವಾರಸ್ಯಕರವಾದ ಘಟನೆಗಳಿಂದ ಕೂಡಿದವುಗಳಾಗಿವೆ. ಗ್ರಾಮೀಣ ಪ್ರದೇಶವೊಂದರ ಸರ್ಕಾರಿ ಶಾಲೆ, ಅಲ್ಲಿದ್ದ ಮೇಷ್ಟ್ರುಗಳು, ಅವರ ಸೋಮಾರಿತನ, ಒಂದಂಕಿ ದಾಟದ ಫಲಿತಾಂಶ, ಹಾಸ್ಟೆಲ್ ಜೀವನ ಎಲ್ಲವೂ ನನ್ನ ಮನೋಭಿತ್ತಿಯಲ್ಲಿ ಅಚ್ಚಳಿಯದೆ ದಾಖಲಾಗಿಬಿಟ್ಟಿವೆ. ನಾನು ಎಂಟನೇ ತರಗತಿಗೆ ಕುಂದೂರುಮಠದಲ್ಲಿದ್ದ ಸರ್ಕಾರಿ ಹೈಸ್ಕೂಲಿಗೆ ದಾಖಲಾದ ವರ್ಷವೇ ಅಲ್ಲಿಗೆ ಜೂನಿಯರ್ ಕಾಲೇಜು ಬಂದಿತ್ತು. ಅದರ ಹಿಂದಿನ ಎರಡು ವರ್ಷಗಳಲ್ಲಿ ಶ್ರೀ ವೆಂಕಟಪ್ಪ ಎಂಬ ಹೆಡ್ಮಾಸ್ಟರ್ ಮಾಡಿದ್ದ ಸಾಧನೆ ಅದಕ್ಕೆ ಕಾರಣ. ವರ್ಷದಲ್ಲಿ ಎರಡು ಮೂರು ಜನ ಮಾತ್ರ ಹತ್ತನೇ ತರಗತಿ ಪಾಸಾಗುತ್ತಿದ್ದ ಹಾಗೂ ಅವ್ಯವಸ್ಥೆಯ ಗೂಡಾಗಿದ್ದ ಆ ಹೈಸ್ಕೂಲಿಗೆ ಹೆಡ್ಮಾಸ್ಟರಾಗಿ ಬಂದ ವೆಂಕಟಪ್ಪನವರು ಕೇವಲ ಎರಡೇ ವರ್ಷದಲ್ಲಿ ಫಲಿತಾಂಶವನ್ನು ಶೇಕಡಾ ಐವತ್ತಕ್ಕೆ ಏರಿಸಿದ್ದರು. ಅದರ ಫಲವಾಗಿ ಆಗ ಮಂತ್ರಿಗಳಾಗಿದ್ದ ದೇವೇಗೌಡರು ಸ್ವತಃ ಆಸಕ್ತಿ ವಹಿಸಿ ಜೂನಿಯರ್ ಕಾಲೇಜು ಕೊಡಿಸಿದ್ದರು. ’ಜಿ.ಹೆಚ್.ಎಸ್. ಕುಂದೂರುಮಠ’ ಇದ್ದಿದ್ದು ’ಜಿ.ಜೆ.ಸಿ. ಕುಂದೂರುಮಠ’ ಆಗಿತ್ತು. ದುರದೃಷ್ಟವೆಂದರೆ, ಹೈಸ್ಕೂಲ್ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರಿಗೆ ಸಾಮರ್ಥ್ಯವಿದ್ದರೂ ಜೂನಿಯರ್ (ಸಂಯುಕ್ತ) ಕಾಲೇಜು ಪ್ರಾಂಶುಪಾಲರಾಗುವಷ್ಟು ಕ್ವಾಲಿಫಿಕೇಷನ್ ಇರಲಿಲ್ಲ. ಅವರು ಬೇರೆಡೆಗೆ ವರ್ಗವಾಗಿದ್ದರಿಂದ, ಹೊಸದಾಗಿ ಬಂದ ಪ್ರಾಂಶುಪಾಲರ ಹೊಣೆಗೇಡಿತನದಿಂದಾಗಿ ಮುಂದಿನ ಮೂರೇ ವರ್ಷದಲ್ಲಿ, ಅಂದರೆ ನನ್ನ ಹೈಸ್ಕೂಲು ಶಿಕ್ಷಣ ಮುಗಿಯುವಷ್ಟರಲ್ಲಿ ಆ ಕಾಲೇಜು ಮುಚ್ಚಿ ಹೋಯಿತು. ಮತ್ತೆ ’ಜಿ.ಹೆಚ್.ಎಸ್. ಕುಂದೂರುಮಠ’ವೇ ಆಯಿತು!

                ಆಡಳಿತದಲ್ಲಿ ಬಿಗಿ ಇಲ್ಲದೆ, ಸ್ವತಃ ದರ್ಬಾರ್ ಮಾಡುತ್ತಿದ್ದ ಕೆಲವು ಮೇಷ್ಟ್ರುಗಳಿಂದಾಗಿ ವಿದ್ಯಾರ್ಥಿಗಳೆಲ್ಲರೂ ಬಿಟ್ಟು ಮೇಯಿಸಿದ ಕುದುರೆಗಳಾಗಿದ್ದರು. ನಾವಂತೂ ಹಾಸ್ಟೆಲ್ಲಿನಲ್ಲಿದ್ದುದರಿಂದ ತಂದೆ-ತಾಯಿಯರ ಭಯವೂ ನಮಗಿರಲಿಲ್ಲ. ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ, ನನ್ನ ಅದೃಷ್ಟಕ್ಕೆ, ಹಾಸ್ಟೆಲ್ಲಿಗೆ ವಾರ್ಡನ್ ಆಗಿ ಶ್ರೀ ಭೀಮಪ್ಪ ಕರಿಯಪ್ಪ ಜಟಗೊಂಡ ಎಂಬುವವರು ಬಂದಿದ್ದರು. ಅವರೊಬ್ಬರು ಮಾತ್ರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ವತಃ ತಾವೇ ಪಾಠ ಮಾಡುತ್ತ, ಬುದ್ಧಿ ಹೇಳುತ್ತಾ ಸ್ವಲ್ಪ ಮಟ್ಟಿಗೆ ಶಿಸ್ತನ್ನೂ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಜೂನಿಯರ್ ಕಾಲೇಜು ಬಂದ ಮರುವರ್ಷದಿಂದಲೇ ಹತ್ತನೇ ತರಗತಿ ಫಲಿತಾಂಶ ಅಧೋಗತಿಗಿಳಿಯಲಾರಂಭಿಸಿತ್ತು. ವೆಂಕಟಪ್ಪನವರು ವರ್ಗವಾದ ವರ್ಷ ಮೂರು, ಅದರ ಮುಂದಿನ ವರ್ಷ ಇಬ್ಬರು ಮಾತ್ರ ಉತ್ತೀರ್ಣರಾಗಿದ್ದರು. ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಸುತ್ತಮುತ್ತಲಿನ ಊರಿನವರು ಮುಂದಿನ ವರ್ಷ ಪಾಸಾಗುವವರು ಒಬ್ಬರೇ ಎಂದು ತಮಾಷೆ ಮಾಡುತ್ತಿದ್ದರು. ನಮ್ಮ ತರಗತಿಯ ಕೆಲವರು ಟೀ.ಸಿ. ತಗೆದುಕೊಂಡು ಬೇರೆಡೆಗೆ ಹೊರಟು ಹೋಗಿದ್ದರು. ಸ್ವತಃ ಅಲ್ಲಿದ್ದ ಒಬ್ಬ ಮೇಷ್ಟ್ರೇ ತಮ್ಮ ಮಗಳನ್ನು ಬೇರೆ ಸ್ಕೂಲಿಗೆ ಸೇರಿಸಿದ್ದರು. ನಮ್ಮ ಅಣ್ಣನೂ ಆ ವರ್ಷ ಫೇಲಾಗಿದ್ದ. ಆದರೂ ನಮ್ಮ ಮನೆಯವರು ನನ್ನನ್ನು ಮಾತ್ರ ಬೇರೆ ಸ್ಕೂಲಿಗೆ ಸೇರಿಸುವ ಯೋಚನೆ ಮಾಡಲಿಲ್ಲ. ಕಾರಣ ನಮ್ಮ ಆಗಿನ ಆರ್ಥಿಕ ಪರಿಸ್ಥಿತಿ. ’ಉಚಿತ ಹಾಸ್ಟೆಲ್ ಇದೆ. ಹೇಗೋ ನೀನು ಕಷ್ಟಪಟ್ಟು ಓದಿದರೆ ಪಾಸಾಗುತ್ತೀಯಾ ಇಲ್ಲ ಫೇಲಾಗುತ್ತೀಯಾ’ ಎಂದು ಬೇರೆ ಸ್ಕೂಲಿಗೆ ಸೇರಿಸುವ ವಿಷಯವನ್ನು ಬಿಟ್ಟೇಬಿಟ್ಟರು. ಇದೇ ಸಮಸ್ಯೆ ಎಷ್ಟೋ ವಿದ್ಯಾರ್ಥಿಗಳಿಗಿತ್ತು. ಹಾಗಾಗಿ ಕೊನೆಗೂ ಹತ್ತನೇ ತರಗತಿಯಲ್ಲಿ ನಲವತ್ತೈದು ಮಂದಿ ಉಳಿದಿದ್ದೆವು.

ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಿಗೆ ಮೇಷ್ಟ್ರುಗಳೇ ಇರಲಿಲ್ಲ. ಹಿಂದಿಯಂತು ನಮಗೆ ಮಿಡ್ಲಿಸ್ಕೂಲ್‌ನಲ್ಲೂ ಇರಲಿಲ್ಲ. ಹಾಗಾಗಿ ಅದರ ಲಿಪಿಗಳನ್ನು ಬರೆಯುವುದಿರಲಿ ಓದುವುದಕ್ಕೂ ಒಂದಕ್ಷರ ಬರುತ್ತಿರಲಿಲ್ಲ. ಆ ವರ್ಷದ ಕೊನೆಯ ಹೊತ್ತಿಗೆ ಪಿ.ಟಿ.ಮೇಷ್ಟ್ರಾಗಿ ಬಂದ ಉಮೇಶ್ ಎಂಬುವವರು, ಹಿಂದಿ ಪ್ರಶ್ನೆ ಪತ್ರಿಕೆಯನ್ನು ನೋಡಿಕೊಂಡು ಅದನ್ನೇ ಉಲ್ಟಾಪಲ್ಟಾ ಮಾಡಿ ಹೇಗೆ ಬರೆಯಬೇಕೆಂದು ತೋರಿಸಿಕೊಟ್ಟಿದ್ದರು. ಐವತ್ತು ಅಂಕಗಳ ಹಿಂದಿ ಪತ್ರಿಕೆಯಲ್ಲಿ ನಾವು ಗಳಿಸಬೇಕಾಗಿದ್ದು ಹದಿಮೂರು ಅಂಕಗಳು ಮಾತ್ರ. ಅದಕ್ಕೆ ನಮಗೆ ಒದಗಿದ ತರಬೇತಿ ಪ್ರಶ್ನೆಪತ್ರಿಕೆಯನ್ನೇ ಉಲ್ಟಾಪಲ್ಟಾ ಮಾಡಿ ಬರೆಯುವಷ್ಟು ಮಾತ್ರ!

ಇನ್ನು ಇಂಗ್ಲೀಷ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೊದಲ ಶತ್ರು. ಸಮಾಜ ಪತ್ರಿಕೆಯನ್ನು ಮಾಡುತ್ತಿದ್ದ ಇಬ್ಬರು ಮೇಷ್ಟ್ರುಗಳು ಇಂಗ್ಲೀಷಿನ ಡಿಟೈಲ್ ಮತ್ತು ನಾನ್‌ಡಿಟೈಲ್ ಪೇಪರ್‌ಗಳನ್ನು ಪರಸ್ಪರ ಹಂಚಿಕೊಂಡಿದ್ದರು. ಅದರಲ್ಲೂ ನಾನ್‌ಡಿಟೈಲ್ ಪೇಪರ್ ತಗೆದುಕೊಳ್ಳುತ್ತಿದ್ದವರು ಮಧ್ಯದಲ್ಲೇ ವರ್ಗವಾಗಿ ಹೋದರು. ಆಗ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರಿಂದ ಅದರ ಉಪನ್ಯಾಸಕರು ಯಾವ ಕೆಲಸವೂ ಇರದೆ ಸುಮ್ಮನೆ ಬೆಲ್ಲು-ಬಿಲ್ಲು ನೋಡಿಕೊಂಡು ಕಾಲ ಕಳೆಯುತ್ತಿದ್ದರು. ಅವರು ಇಂಗ್ಲೀಷ್ ಪಾಠ ಮಾಡಬಹುದಿತ್ತು. ನಾವು ವಿದ್ಯಾರ್ಥಿಗಳೇ ಕೇಳಿಕೊಂಡ ಮೇಲೆ ಅವರು ಒಪ್ಪಿಕೊಂಡರೂ, ಈ ಸಮಾಜದ ಮೇಷ್ಟ್ರು ಒಪ್ಪಲೇ ಇಲ್ಲ! ’ಅದು ನನ್ನ ಕೆಲಸ ನಾನೇ ಮಾಡುತ್ತೇನೆ’ ಎಂದು ಅಡ್ಡರಾಗ ಹಾಡಿಯೇಬಿಟ್ಟರು. ಅಂತೂ ನಮಗೆ ಇಂಗ್ಲೀಷ್ ಪಾಠ ಕೇಳುವ ಅದೃಷ್ಟ ಬರಲೇಯಿಲ್ಲ! ನಾನು ಇಂಗ್ಲೀಷ್ ಭಾಷೆಯ ಒಂದು ಗೈಡನ್ನು ಕೊಂಡು ಪರೀಕ್ಷೆಗೆ ಸ್ದಿದ್ಧನಾಗಿದ್ದೆ. ನನ್ನ ವಿದ್ಯಾರ್ಥಿ ಬದುಕಿನ ಮೊದಲ ಮತ್ತು ಕೊನೆಯ ಗೈಡ್ ಅದಾಗಿತ್ತು!

ಕುಂದೂರುಮಠದ ಹೈಸ್ಕೂಲಿನಲ್ಲಿ ಏನೇ ಅವ್ಯವಸ್ಥೆಯಿರಲಿ, ವ್ಯವಸ್ಥೆ ಎಷ್ಟೇ ರೋಗಗ್ರಸ್ಥವಾಗಿರಲಿ, ಪರೀಕ್ಷೆಯಂತೂ ಬಂದೇಬಿಟ್ಟಿತ್ತು. ಅಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಉದಯಪುರ ಹೈಸ್ಕೂಲಿನಲ್ಲಿ ಪರೀಕ್ಷಾ ಕೇಂದ್ರ. ಇದ್ದ ನಲವತ್ತೈದರಲ್ಲಿ ನಲವತ್ತೆರಡು ಜನ ಪರೀಕ್ಷೆ ತಗೆದುಕೊಂಡಿದ್ದೆವು. ಪ್ರತೀವರ್ಷ ಅಲ್ಲಿಗೆ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಊಟ ವಸತಿಗೆಲ್ಲಾ ಪರದಾಡಬೇಕಾಗುತ್ತಿತ್ತು. ನಮ್ಮ ಅದೃಷ್ಟಕ್ಕೆ ಅಲ್ಲಿಯೂ ಒಂದು ಓ.ಬಿ.ಸಿ.ಹಾಸ್ಟೆಲ್ ಇದ್ದು, ಅದರ ವಾರ್ಡನ್ ಆಗಿದ್ದ ಸಿ.ಎನ್. ಅಂಗಡಿ ಎಂಬುವವರು ನಮ್ಮ ಹಾಸ್ಟೆಲಿನ ವಾರ್ಡನ್ ಜಟಗೊಂಡ ಅವರಿಗೆ ಸ್ನೇಹಿತರಾಗಿದ್ದರು. ಇಬ್ಬರೂ ಬೆಳಗಾವಿ ಜಿಲ್ಲೆಯವರೇ ಆಗಿದ್ದರು. ಆದ್ದರಿಂದ ಇಬ್ಬರೂ ಪರಸ್ಪರ ಮಾತನಾಡಿ ಹಾಸ್ಟೆಲ್ಲಿನಲ್ಲಿದ್ದ ಹದಿಮೂರು ಜನ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಏರ್ಪಡಿಸಿದ್ದರು. ಜೊತೆಗೆ, ನಮ್ಮ ಸಹಾಯಕ್ಕಿರಲಿ ಎಂದು ಇಬ್ಬರು ಎಂಟನೇ ತರಗತಿಯ ಹುಡುಗರನ್ನೂ ನಮ್ಮ ಜೊತೆ ಕಳುಹಿಸಿದ್ದರು. ಅಂತೂ ಪರೀಕ್ಷೆ ಬರೆದಿದ್ದೂ ಆಯಿತು.

ಆ ವರ್ಷ ಫಲಿತಾಂಶಗಳು ಪ್ರಕಟವಾಗಿದ್ದು ತುಂಬಾ ತಡವಾಗಿ. ನಮಗಂತೂ, ಅಂದರೆ ಸಪ್ಲಿಮೆಂಟರಿ ಪರೀಕ್ಷೆ ತಗೆದುಕೊಂಡಿದ್ದ ನನ್ನಣ್ಣನಿಗು ಹಾಗೂ ನನಗು ಎರಡು ದಿನಕ್ಕೊಮ್ಮೆ ಸ್ಕೂಲಿಗೆ ಅಲೆಯುವುದೇ ಕೆಲಸವಾಗಿತ್ತು. ಕೊನೆಗೆ ನಾನೊಂದು ದಿನ ಅವನೊಂದು ದಿನ ಎಂದು ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ನಮ್ಮ ಫಲಿತಾಂಶ ನಮಗೆ ಗೊತ್ತಾಗಿದ್ದು ಮಾತ್ರ ಒಂದು ವಿಚಿತ್ರ ಸನ್ನಿವೇಶದಲ್ಲಿ.

ಗುರುವಾರದ ಗಂಡಸಿ ಸಂತೆ ನಮ್ಮ ಸುತ್ತಮುತ್ತಲಿನವರಿಗೆ ಅತ್ಯಂತ ಪ್ರಮುಖವಾದುದ್ದು. ಬುಧುವಾರ ರಾತ್ರಿಯೇ ಕಾಯಿ, ರಾಗಿ ಮಾರಬೇಕಾದವರು ಸಂತೆ ಸೇರಿ, ಬೆಳಗಿನ ಜಾವವೇ ವ್ಯಾಪಾರ ಮುಗಿಸಿಬಿಡುತ್ತಾರೆ. ಅಂದು ಬುಧವಾರ ರೇಡಿಯೋದಲ್ಲಿ ’ನಾಳೆ ರಾಜ್ಯಾದ್ಯಂತ ಹೈಸ್ಕೂಲ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ’ ಎಂಬ ಸುದ್ದಿ ಬಂದಿತ್ತು. ಆದರೂ ನಮ್ಮ ತಂದೆ ನನ್ನ ದೊಡ್ಡಣ್ಣನ ಜೊತೆಯಲ್ಲಿ ಸಂತೆಗೆ ಹೋಗಿಬರಲು ಹೇಳಿದ್ದರು. ನಾನು ’ರಿಸಲ್ಟ್ ಬರುತ್ತದೆ ನಾನು ಹೋಗುವುದಿಲ್ಲ’ ಅಂದರೆ, ’ನಿಮ್ಮ ಸ್ಕೂಲಿನಲ್ಲಿ ರಿಸಲ್ಟ್ ಹಾಕುವುದೇ ಹನ್ನೊಂದು ಗಂಟೆಯ ಮೇಲೆ. ಅಷ್ಟೊತ್ತಿಗೆ ಕಾಯಿ ಕೊಟ್ಟು ಬಂದುಬಿಡಿ’ ಎಂದು ಹೊರಡಿಸಿಬಿಟ್ಟಿದ್ದರು. ರಾತ್ರಿಯೇ ಗಾಡಿ ಮೇಲೆ ಪ್ರಯಾಣ ಮಾಡಿ ಸಂತೆಮಾಳದಲ್ಲಿದ್ದ ಒಂದು ’ಟೆಂಟ್’ ಹೋಟೆಲಿನಲ್ಲಿ ಬಿಡಾರ ಹೂಡಿದೆವು. ಇಡೀ ರಾತ್ರಿ ನಿದ್ದೆಯಿಲ್ಲದೆ ’ನನ್ನ ರಿಸಲ್ಟ್ ಪಾಸಾದರೆ ಏನಾಗಬಹುದು, ಫೇಲಾದರೆ ಏನಾಗಬಹುದು’ ಎಂಬ ಲೆಕ್ಕಾಚಾರ ಮಾಡುತ್ತಿದ್ದೆ. ಒಂದರೆಗಳಿಗೆಯೂ ನಾನವತ್ತು ನಿದ್ದೆ ಮಾಡಲಿಲ್ಲ!

ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ನಮ್ಮ ಕಾಯಿಗಳು ಮಾರಾಟವಾಗಿ ದುಡ್ಡು ಕೈಗೆ ಬಂತು. ತಕ್ಷಣ ನಾನು ಗಾಡಿಯನ್ನು, ನನ್ನಣ್ಣನನ್ನು ಬಿಟ್ಟು ಸಿಕ್ಕಿದ ಲಾರಿ ಹತ್ತಿ ಊರಿಗೆ ಬಂದೆ. ಇನ್ನು ಲಾರಿ ಇಳಿಯುತ್ತಿರುವಾಗಲೇ ಎದುರಿಗೆ ಪೋಸ್ಟ್‌ಮ್ಯಾನ್ ತಮ್ಮಯ್ಯ ಸಿಕ್ಕಬೇಕೆ! ನನ್ನ ಅವಸರವನ್ನು ಬಲ್ಲ ಆತ ’ಲೇ ನಿಮ್ಮ ರಿಸಲ್ಟ್ ನೆನ್ನೇನೆ ನೋಡಿದ್ದೆ. ಒಬ್ಬನೇ ಪಾಸಾಗಿರೋದು’ ಎಂದು ಛೇಡಿಸಿದ. ’ಅದು ಯಾರು?’ ಎಂಬುದಕ್ಕೆ ಮಾತ್ರ ಆತನ ಬಳಿ ಉತ್ತರವಿರಲಿಲ್ಲ. ಆತ ಛೇಡಿಸಿದ್ದನೋ? ಇಲ್ಲವೋ? ಅಲ್ಲಿಂದ ಹತ್ತೇ ನಿಮಿಷದಲ್ಲಿ ನಾಗೇಶ್ ಎಂಬುವವರು ಸಿಕ್ಕು ’ಏನಪ್ಪ ಹೊಡಿದ್ಯಲ್ಲ ಬಂಪರ್. ನಿಮ್ಮ ಸ್ಕೂಲಿನಲ್ಲಿ ನೀನೊಬ್ಬನೇ ಪಾಸಾಗಿರೋದಂತೆ’ ಎಂದರು. ಅಂತೂ ಅದು ನಿಜವಾಗಿತ್ತು. ನನಗೆ ಆಘಾತ, ಆನಂದ ಎಲ್ಲವೂ ಆಯಿತು. ಅದಕ್ಕಿಂತಲೂ ಆಘಾತದ ಸಂಗತಿಯೆಂದರೆ ಉಳಿದ ನಲವತ್ತೊಂದು ಜನ ವಿದ್ಯಾರ್ಥಿಗಳಲ್ಲಿ ಒಬ್ಬನೂ, ಆರರಲ್ಲಿ ಐದು ಪತ್ರಿಕೆಗಳಲ್ಲಿ ಪಾಸಾಗಿರಲಿಲ್ಲ! ಇಬ್ಬರು ಮಾತ್ರ ನಾಲ್ಕು ಪತ್ರಿಕೆಗಳಲ್ಲಿ ಪಾಸಾಗಿದ್ದರು!!

ಹೀಗೆ ತನ್ನ ಅಧೋಮುಖ ಸ್ಥಿತಿಯತ್ತ ಮುಖಮಾಡಿ ನಿಂತಿದ್ದ ಸರ್ಕಾರಿ ಕೃಪಾಫೋಷಿತ ವ್ಯವಸ್ಥೆಯ ಬಗ್ಗೆ, ಸುಮಾರು ಇಪ್ಪತ್ತೈದು ವರ್ಷಗಳ ನಂತರ ತಿರುಗಿ ನೋಡಬೇಕೆನ್ನಿಸಿದೆ. ಆ ಮೂರು ವರ್ಷಗಳ ಅವಧಿಯ ನನ್ನ ಬದುಕನ್ನು ನಾನು ಮತ್ತೆ ಕಾಣಬೇಕೆನ್ನಿಸಿದೆ. ಎಲ್ಲವನ್ನೂ ಒಟ್ಟಿಗೆ ಯಾರಿಗಾದರೂ ಹೇಳಬೇಕೆನ್ನಿಸಿದೆ. ಅಲ್ಲಿ ನಾನು ಕಂಡ ವ್ಯಕ್ತಿಗಳು, ಪರಿಸ್ಥಿತಿ, ಮೇಷ್ಟ್ರುಗಳು, ಅವರುಗಳ ದೊಡ್ಡತನ, ಸೋಗಲಾಡಿತನ, ಅಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆ ಎಂಬ ಅವ್ಯವಸ್ಥೆ ಮೊದಲಾದವನ್ನು ಇಂದು ನನ್ನ ಅನುಭವದ ಹಿನ್ನೆಲೆಯಲ್ಲಿ ಹಿಡಿದಿಡಬೇಕೆನ್ನಿಸಿದೆ.

ಇದು ಆತ್ಮಚರಿತ್ರೆಯಲ್ಲ. ಆತ್ಮದ ಬಗ್ಗೆ ನನಗೆ ನಂಬಿಕೆಯೂ ಇಲ್ಲ! ಜೀವನ ಚರಿತ್ರೆಯೂ ಅಲ್ಲ. ಏಕೆಂದರೆ ಕೇವಲ ಮೂರೇ ವರ್ಷದ ಕಾಲಮಿತಿ ಇದಕ್ಕಿದೆ. ಆದ್ದರಿಂದ ಇದು, ನನ್ನ ಇತಿಹಾಸವನ್ನು ನಾನೇ ಕಂಡುಕೊಳ್ಳುವ, ಇತಿಹಾಸದ ಭಾಗವಾಗಿ ಹೋಗಿರುವ ನನ್ನನ್ನು ಮತ್ತು ಒಂದು ಕಾಲಘಟ್ಟದ ನನ್ನ ಬದುಕನ್ನು ನಾನೇ ಸಂಶೋಧಿಸುವ ಪುಟ್ಟ ಪ್ರಯತ್ನ ಮಾತ್ರ. ಹಾಗೇ ನೋಡಿದರೆ ಎಲ್ಲ ಆತ್ಮಕಥೆಗಳೂ ಜೀವನಚರಿತ್ರೆಗಳೂ ಐತಿಹಾಸಿಕ ಸಂಶೋಧನೆಗಳೇ ಆಗಿರುತ್ತವೆ!

ಕುಂದೂರುಮಠ

ನಾನು ಈಗ ಹೇಳಹೊರಟಿರುವ ಸಂಪೂರ್ಣ ಕಥೆ ಕುಂದೂರುಮಠದಲ್ಲೇ ನಡೆದದ್ದು. ಆದ್ದರಿಂದ ಕುಂದೂರುಮಠದ ಸಾಂಸ್ಕೃತಿಕ ಹಿನ್ನೆಲೆ ಮುನ್ನೆಲೆಗಳನ್ನು ಸ್ಥೂಲವಾಗಿ ಪರಿಚಯ ಮಾಡಿಕೊಟ್ಟುಬಿಡುತ್ತೇನೆ. ಅದರ ಹಿನ್ನೆಲೆಯಿದ್ದರೆ ಮುಂದೆ ನಾನು ಕೊಡುವ ಚಿತ್ರಣ ಸ್ಪಷ್ಟವಾಗಿ ಗೋಚರವಾಗುತ್ತದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿಯ ಒಂದು ಗ್ರಾಮ ಕುಂದೂರು. ಆಗ್ಗೆ ಇಲ್ಲಿ ಒಂದರಿಂದ ಏಳನೇ ತರಗತಿಯವರಗೆ ಸರ್ಕಾರಿ ಮಾಧ್ಯಮಿಕ ಶಾಲೆಯಿತ್ತು. ಹೊಳೇನರಸೀಪುರ ವಿಧಾನಸಭೆ ಹಾಗೂ ಹಾಸನ ಲೋಕಸಭೆ ಕ್ಷೇತ್ರಕ್ಕೆ ಸೇರುವ ಈ ಊರು ದೇವೇಗೌಡರ ರಾಜಕೀಯ ಏಳುಬೀಳುಗಳೊಂದಿಗೇ ಗುರುತಿಸಿಕೊಳ್ಳುತ್ತಾ ಬರುತ್ತಿದೆ. ಈ ಕುಂದೂರಿನಿಂದ ಪಶ್ಚಿಮಕ್ಕೆ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಮಠವಿದೆ. ಅದನ್ನು ಸಾಮಾನ್ಯವಾಗಿ ಕುಂದೂರುಮಠ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿರುವ ಎರಡನೇ ಒಕ್ಕಲಿಗ ಮಠ ಎಂದು ಹೇಳುತ್ತಾರೆ.

ಇಡೀ ಮಠ ಸುತ್ತಮುತ್ತಲಿನ ಹಳ್ಳಿಯ ಕೆಲವರಿಗೆ ಹೊತ್ತು ಕಳೆಯುವ, ಭಂಗಿ ಸೇದುವ ’ಅಡ್ಡಾ’ ಇದ್ದ ಹಾಗೆ. ಚುನಾವಣೆ ಬಂದಾಗ ರಾಜಕಾರಣಿಗಳಿಗೆ ಸಭೆ ಸಮಾರಂಭಗಳನ್ನು ನಡೆಸಲು ತಕ್ಕ ತಾಣ. ಇಲ್ಲಿ ದೇವೇಗೌಡರು ರಾಜಕೀಯ ಪ್ರವರ್ಧಮಾನಕ್ಕೆ ಬಂದ ಹಾಗೆ ಬೆಳವಣಿಗೆಗಳೂ ಆಗಿವೆ. ಒಂದು ಹೈಸ್ಕೂಲು, ಆಸ್ಪತ್ರೆ, ಓ.ಬಿ.ಸಿ.ಹಾಸ್ಟೆಲ್, ಜೂನಿಯರ್ ಕಾಲೇಜು ಆಗಿದ್ದವು. ಈಗ ಜೂನಿಯರ್ ಕಾಲೇಜು ಇಲ್ಲ. ಇವುಗಳ ಕಟ್ಟಡಗಳು ಮತ್ತು ಕೆಲವು ಕ್ವಾರ್ಟ್ರಸ್‌ಗಳನ್ನು ಬಿಟ್ಟರೆ ಇನ್ನಾವುದೇ ಖಾಸಗೀ ಕಟ್ಟಡಗಳು ಅಲ್ಲಿಲ್ಲ. ಅಲ್ಲಿರುವ ಎಲ್ಲಾ ಆಸ್ತಿಯು ಮಠಕ್ಕೆ ಸೇರಿದ್ದರಿಂದ ಹೆಚ್ಚಿನ ಬೆಳವಣಿಗೆಗಳು ಆಗಿಲ್ಲ. ಕೆಲವು ತಾತ್ಕಾಲಿಕ ಗುಡಿಸಲುಗಳಲ್ಲಿ ಹೊಟೇಲು ಅಂಗಡಿಮುಂಗಟ್ಟುಗಳು ಇದ್ದವು.

ಈ ಮಠದಲ್ಲಿ ಮೂರು ಸುತ್ತಿನ, ಪುಟ್ಟದಾದ, ಹೆಚ್ಚು ಎತ್ತರವಿಲ್ಲದ ಒಂದು ಕೋಟೆ(ಪೌಳಿ) ಇದೆ. ಅದನ್ನು ಹತ್ತಿ ಹೋಗಲು ಸುಮಾರು ಐವತ್ತು ಮೆಟ್ಟಿಲುಗಳಿವೆ. ನಡುವೆ ಒಂದು ರಂಗನಾಥಸ್ವಾಮಿ ದೇವಾಲಯ, ಒಂದು ಶಿವಾಲಯ ಹಾಗೂ ಸ್ವಾಮೀಜಿಗಳು ವಾಸಿಸುವ ಮನೆಗಳಿವೆ. ಮಠದಿಂದ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಎರಡು ಸುಬ್ರಹ್ಮಣ್ಯ ದೇವರ ಗುಡಿಗಳಿವೆ. ಅವುಗಳನ್ನು ಮೇಲಿನ ಸುಬ್ಬಪ್ಪ ಮತ್ತು ಕೆಳಗಿನ ಸುಬ್ಬಪ್ಪನ ಗುಡಿಗಳೆಂದು ಕರೆಯುತ್ತಾರೆ. ಈ ಮೇಲಿನ ಗುಡಿಯಿರುವ ಜಾಗದಿಂದ ಒಂದು ನಾಯಿ ಮತ್ತು ಕೆಳಗಿನ ಗುಡಿಯಿರುವ ಜಾಗದಿಂದ ಒಂದು ಮೊಲ ಓಡುತ್ತಾ ಬಂದು, ಈಗ ಮಠವಿರುವ ಜಾಗದಲ್ಲಿ ಜಗಳಕ್ಕೆ ಬಿದ್ದವಂತೆ! ನಂತರ ಯಾವುದೂ ಸೋಲದೆ ಇದ್ದುದ್ದನ್ನು ಕಂಡವರೊಬ್ಬರು ಅದನ್ನು ’ಗಂಡುಭೂಮಿ’ ಎಂದು ಕರೆದು ಮಠ ಸ್ಥಾಪನೆ ಮಾಡಿದರಂತೆ!! ಮಠ ಸ್ಥಾಪನೆ ಮಾಡಿದ್ದು ವಿಜಯನಗರದ ಅರಸರು ಎಂಬುದು ಇನ್ನೊಂದು ಕಥೆ!!!

ಅದೇನೇ ಇರಲಿ. ಇತ್ತೀಚಿಗೆ ನನ್ನಲ್ಲಿ ಬೆಳೆದ ಐತಿಹಾಸಿಕ ಮತ್ತು ಜಾನಪದ ಸಂಶೋಧನೆಯ ಆಸಕ್ತಿಯಿಂದ ಈ ಮಠದ ಬಗ್ಗೆ ಒಂದು ಸಂಶೋಧನಾ ಲೇಖನವನ್ನು, ಡಾ. ಎಂ. ಬೈರೇಗೌಡ ಅವರ ಜೊತೆಯಲ್ಲಿ ಸೇರಿ ಸಿದ್ಧಪಡಿಸಿದ್ದೆ. ಅದು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಸಂಶೋಧನೆಯ ಫಲಿತಾಂಶದಂತೆ, ಈ ಮಠದ ಇತಿಹಾಸ ಹೀಗಿದೆ. ಮೂಲತಃ ಕುರುಬರಿಗೆ ಸೇರಿದ ಮಠ ಇದಾಗಿದ್ದು, ತಿಪಟೂರು ತಾಲೋಕಿನ, ಕೆರಗೋಡು ರಂಗಾಪುರ ಎಂಬಲ್ಲಿರುವ ಮಠದ ಶಾಖಾಮಠ ಇದಾಗಿತ್ತು. ನಂತರದ ದಿನಗಳಲ್ಲಿ ಒಕ್ಕಲಿಗ ಪ್ರಾಬಲ್ಯ ಹೆಚ್ಚಾದಂತೆ (ಕುರುಬ ಒಕ್ಕಲಿಗ ಎಂಬ ಜಾತಿಯೂ ಇದೆ!) ಒಕ್ಕಲಿಗರ ಮಠ ಎಂಬ ಪ್ರಚಾರ ಸಿಕ್ಕಿದೆ. ಈಗಲೂ ಕುಂದೂರಿನಲ್ಲಿ ನಡೆಯುವ ರಂಗನ ಕುಣತದಲ್ಲಿ ಮೊದಲಿಗೆ ಪೂಜೆ ಸಲ್ಲುವುದು ಕುರುಬರ ದೈವವಾದ ಬೀರೆ(ರ)ದೇವರಿಗೆ! ಮಠದಲ್ಲಿರುವ ದಾಖಲೆಗಳಿಂದಲೂ ಅದು ಮೂಲತಃ ಕುರುಬರ ಮಠ ಎಂಬುದು ಸ್ಪಷ್ಟವಾಗುತ್ತದೆ. ಮಠದಲ್ಲಿ ಕುರಿ ಸಾಕಾಣಿಕೆ ಒಂದು ಕಸುಬಾಗಿಯೇ ಬೆಳೆದು ಬಂದಿದೆ. ನಾವು ಹೈಸ್ಕೂಲು ಓದುವಾಗ್ಗೆ ಮಠದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕುರಿಗಳಿದ್ದವು.

ಈ ಮಠದಿಂದ ದಕ್ಷಿಣಕ್ಕೆ, ಕೂಗಳತೆಯ ದೂರದಲ್ಲಿ ಮೆಳೆಯಮ್ಮ ಎಂಬ ರಕ್ತದೇವತೆಯ ಗುಡಿಯಿದೆ. ಇಲ್ಲಿ ಪ್ರತಿದಿನ ನೂರಾರು ಭಕ್ತಾದಿಗಳು ಬಂದು ಕುರಿ, ಕೋಳಿ, ಹಂದಿಗಳನ್ನು ಮೆಳೆಯಮ್ಮನಿಗೆ ಬಲಿ ಕೊಟ್ಟು, ಅಲ್ಲಿಯೇ ಅಡುಗೆ ಮಾಡಿ, ಊಟ ಮಾಡಿಕೊಂಡು ಹೋಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೂರ್ಣಿಮೆ ದಿನಗಳಲ್ಲಿ ಇಲ್ಲಿ ಬಲಿಯಾಗುವ ಕುರಿ ಕೋಳಿಗಳ ಸಂಖ್ಯೆ ಸಾವಿರವನ್ನು ದಾಟುತ್ತದೆ. ಹೀಗೆ ಬಲಿ ಕೊಡಲು, ಮಠಕ್ಕೆ ಹಣ ಪಾವತಿಸಿ ರಸೀತಿ ಪಡೆಯಬೇಕು. ಕುರಿ, ಮೇಕೆಯ ಬಲಿಯಾದರೆ ಅವುಗಳ ಚರ್ಮವನ್ನು ಮಠಕ್ಕೆ ಒಪ್ಪಿಸಬೇಕು. ಇವುಗಳಿಂದ ಮಠಕ್ಕೆ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಬರುತ್ತದೆ. ಜೊತೆಗೆ ಸಾಕಷ್ಟು ತೆಂಗಿನ ತೋಟವೂ ಜಮೀನೂ ಇದೆ.

ಇವುಗಳಲ್ಲದೆ, ಸುಗ್ಗಿಕಾಲದಲ್ಲಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ರೈತರುಗಳಿಂದ ರಾಗಿ, ಜೋಳ, ಭತ್ತ... ಹೀಗೆ ಬೆಳೆದಿದ್ದರಲ್ಲಿ ನಾಲ್ಕೈದು ಸೇರು ಧಾನ್ಯವನ್ನು, ಕೆಲವು ತೆಂಗಿನಕಾಯಿಗಳನ್ನು ವಸೂಲಿ ಮಾಡುತ್ತಿದ್ದರು. ವಸೂಲಿಗೆ ಹೋಗುವಾಗ, ಮುಂದೆ ಧ್ವಜ, ಛತ್ರಿ, ಚಾಮರಗಳನ್ನು ಹಿಡಿದ ಜನರು ಇದ್ದರೆ, ಅವರ ಹಿಂದೆ ಒಂದು ಬಸವನ ಮೇಲೆ ಒಬ್ಬ ಢಕ್ಕೆ ಬಡಿದುಕೊಂಡು ಕುಳಿತಿರುತ್ತಿದ್ದ. ಕೊಂಬು ಕಹಳೆ ಊದುವ ಜನರೂ ಇರುತ್ತಿದ್ದರು. ಅವರ ಹಿಂದೆ ಕುದುರೆಯ ಮೇಲೆ ಸ್ವಾಮೀಜಿಗಳಿರುತ್ತಿದ್ದರು. ಅವರ ಹಿಂದೆ ನಾಲ್ಕಾರು ಗಾಡಿಗಳು ಸಾಗುತ್ತಿದ್ದವು. ಹೀಗೆ ಕುಂದೂರುಮಠದ ಸ್ವಾಮೀಜಿಗಳು ವಸೂಲಿಗೆ ಹೊರಟರೆಂದರೆ, ಒಂದು ಚಿಕ್ಕ ಮೆರವಣಿಗೆಯೇ ಹೊರಟಂತಾಗುತ್ತಿತ್ತು!

ಕುದ್ರೆ ಕುಂದೂರಯ್ಯ

                ಕುಂದೂರಯ್ಯ ಕುದ್ರೆ ಕೊಡು

                ಹತ್ತಿ ನೋಡಾನ;

                ಬಾಗೂರಯ್ಯ ಬಾಗ್ಲು ತಗಿ

                ಬಗ್ಗಿ ನೋಡಾನ.

ಎಂಬುದು ಕುಂದೂರು ಪರಿಸರದ ಅತ್ಯಂತ ಜನಪ್ರಿಯ ಶಿಶುಪ್ರಾಸ. ಕುಂದೂರುಮಠಕ್ಕೂ ಕುದುರೆಗೂ ಅವಿನಾಭಾವ ಸಂಬಂಧ. ನಾವು ಹೈಸ್ಕೂಲಿನಲ್ಲಿದ್ದಾಗ ನಂಜಯ್ಯ ಎಂಬ ’ದೊಡ್ಡಯ್ಯನೋರು’ ಬದುಕಿದ್ದರು. ಆಗಿದ್ದ ’ಸಣ್ಣಯ್ಯನೋರು’ ಈಗ ’ದೊಡ್ಡಯ್ಯನೋರು’ ಆಗಿದ್ದಾರೆ. ಮೊದಲ ಮಠಾಧಿಪತಿಯೊಬ್ಬರು ಜೀವಂತ ಸಮಾಧಿಯಾಗಿದ್ದಾರೆ ಎಂಬ ಪ್ರತೀತಿಯೂ ಇದೆ. ದೊಡ್ಡಯ್ಯನೋರು ಕುದುರೆ ಓಡಿಸುವುದರಲ್ಲಿ ನಿಪುಣರಾಗಿದ್ದರು. ಒಮ್ಮೆ ಮಠಕ್ಕೆ ನುಗ್ಗಿದ್ದ ಕಳ್ಳರು ಎಲ್ಲಾ ಕುರಿಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರಂತೆ. ರಂಗನಾಥಸ್ವಾಮಿಯೇ ಕನಸಿನಲ್ಲಿ ಬಂದು ಆಗ ಸಣ್ಣಯ್ಯನೋರಾಗಿದ್ದ ನಂಜಯ್ಯನನ್ನು ಎಬ್ಬಿಸಿದನಂತೆ! ಬೆತ್ತಲೆ ಕುದುರೆ ಹತ್ತಿದ ನಂಜಯ್ಯ, ಲಾರಿಯನ್ನು ಬೆನ್ನತ್ತಿ ಸಕಲೇಶಪುರದ ಬಳಿ ಕಳ್ಳರನ್ನು ಹಿಡಿದರಂತೆ! ಆಗಿನಿಂದ ಅವರಿಗೆ ’ಕುದುರೆ ನಂಜಯ್ಯ’ ಎಂಬ ಹೆಸರು ಬಂದಿತಂತೆ! ಇನ್ನೊಂದು ಕಥೆಯಲ್ಲಿ, ಕಾರಿದ್ದ ಒಬ್ಬ ಸಾಹುಕಾರನಿಗೂ ಈ ನಂಜಯ್ಯನ ಕುದುರೆಗೂ ಪಂದ್ಯವಾಗಿ, ನಂಜಯ್ಯ ಕುದುರೆ ಸವಾರಿ ಮಾಡಿ ಗೆದ್ದರಂತೆ! ಉಸಿರು ಕಟ್ಟಿದ್ದ ಕುದುರೆಗೆ ತಕ್ಷಣ ನೀರು ಕುಡಿಸಿದ್ದರಿಂದ ಅದು ಸತ್ತು ಹೋಯಿತಂತೆ! ಅದನ್ನು ಮಠದ ಆವರಣದಲ್ಲಿ ಸಮಾಧಿ ಮಾಡಲಾಯಿತಂತೆ!

                ಇಂತಹ ಕಥೆಗಳನ್ನು ನಾವು ಬಾಲ್ಯದಲ್ಲಿ ತುಂಬಾ ಕೇಳಿದ್ದೆವು. ಆದ್ದರಿಂದ ಕುಂದೂರುಮಠದ ಬಗ್ಗೆ ಸುತ್ತಮುತ್ತಲಿನ ಮಕ್ಕಳಿಗೆ ಏನೋ ಒಂದು ಬಗೆಯ ಆಕರ್ಷಣೆ. ಅದಕ್ಕಿಂತ ವಿಶೇಷ ಆಕರ್ಷಣೆಯೆಂದರೆ ಅಲ್ಲಿ ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಯುವ ಷಷ್ಠಿ ಜಾತ್ರೆ. ಮುಖ್ಯಜಾತ್ರೆ ಕಳೆದ ಒಂದು ತಿಂಗಳಿಗೆ ಮತ್ತೊಮ್ಮೆ ’ಮರಿಜಾತ್ರೆ’ ಎಂದು ಹಬ್ಬ ಮಾಡುತ್ತಿದ್ದರಾದರೂ ಆಗ ಅಂಗಡಿಗಳು ಸೇರುತ್ತಿರಲಿಲ್ಲ.

ಮೆಳೆಯಮ್ಮನ ಕಥೆ, ಮಲ್ಲಿಕಾರ್ಜುನ ಪೂಜಾರಿ ಇತ್ಯಾದಿ...

ಕುಂದೂರುಮಠದಲ್ಲಿರುವ ಹಲವಾರು ದೇವರುಗಳನ್ನು ಪೂಜೆ ಮಾಡಲು ಸಾಕಷ್ಟು ಪೂಜಾರಿಗಳು ಇದ್ದರು. ಅವರೆಲ್ಲರೂ ಕುಂದೂರಿನಲ್ಲಿ ವಾಸವಾಗಿದ್ದರು. ಅವರಿಗೆ ಮಠದ ವತಿಯಿಂದ ಜಮೀನು ಕೊಡಲಾಗಿತ್ತು. ಮಂಗಳಾರತಿ ತಟ್ಟೆಗೆ ಬೀಳುವ ಕಾಸು ಅವರದೇ ಆಗುತ್ತಿತ್ತು. ಅವರಿಗೆ ಸಂಬಳ ಕೊಡುವ ಪ್ರತ್ಯೇಕ ವ್ಯವಸ್ಥೆ ಇದ್ದಂತಿರಲಿಲ್ಲ. ಈ ಪೂಜಾರಿಗಳು ಮೂರ್‍ನಾಲ್ಕು ಕುಟಂಬಕ್ಕೆ ಸೇರಿದ, ಲಿಂಗಾಯಿತ ಸಮಾಜದವರಾಗಿದ್ದರು. ಒಂದೊಂದು ತಿಂಗಳ ಕಾಲದ ಸರದಿಯ ಮೇಲೆ ಎಲ್ಲಾ ದೇವಾಲಯಗಳಲ್ಲೂ ಒಬ್ಬೊಬ್ಬರು ಪೂಜೆ ಮಾಡುತ್ತಿದ್ದರು. ಲಿಂಗಾಯಿತರಾದರೂ ರಂಗನಾಥಸ್ವಾಮಿಗೂ ಅವರೇ ಪೂಜೆ ಮಾಡುತ್ತಿದ್ದುದ್ದು ಯಾವುದೇ ಧರ್ಮಸಾಮರಸ್ಯದಿಂದಲ್ಲ; ಕೇವಲ ಸ್ವ-ಅನುಕೂಲಕ್ಕಾಗಿ ಮಾತ್ರ!

ಮೆಳೆಯಮ್ಮ ಎಂಬ ರಕ್ತದೇವತೆಯ ಪೂಜೆ ಮಾಡಲು ಈ ಪೂಜಾರಿಗಳಲ್ಲಿ ಪೈಪೋಟಿ ಇತ್ತೆಂಬುದು ಮಾತ್ರ ಸುಳ್ಳಲ್ಲ. ಏಕೆಂದರೆ ಅದಕ್ಕೆ ಬರುತ್ತಿದ್ದ ಅಸಂಖ್ಯಾತ ಭಕ್ತರಿಂದಾಗಿ ಅವರ ಮಂಗಳಾರತಿ ತಟ್ಟೆಯ ಆದಾಯ ಹೆಚ್ಚುತ್ತಿತ್ತು. ಕೇವಲ ದೇವರಿಗೆ ಹಣ್ಣು-ಕಾಯಿ ಮಾಡಿಸಲು ಬಂದವರಿಂದಲೂ, ಒಂದೊಂದು ಬಾಳೆಹಣ್ಣು ಮತ್ತು ಒಂದು ಹೋಳು ತೆಂಗಿನಕಾಯಿಯನ್ನು ತಾವೇ ಇಟ್ಟುಕೊಳ್ಳುತ್ತಿದ್ದರು.

ಇಂತಹ ಪೂಜಾರಿಗಳ ಸಮೂಹದಲ್ಲಿ ಮಲ್ಲಕಾರ್ಜುನ ಎಂಬ ಹುಡಗನೂ ಇದ್ದ. ನನಗಿಂತ ಒಂದು ವರ್ಷ ಚಿಕ್ಕವನಾಗಿದ್ದ ಆತ ಐದನೇ ತರಗತಿಯಲ್ಲಿದ್ದಾಗಲಿಂದಲೂ ನನಗೆ ಪರಿಚಯ. ಆತ ಎಂಟನೇ ತರಗತಿಗೆ ಕುಂದೂರುಮಠದ ಹೈಸ್ಕೂಲಿಗೆ ಸೇರಿಕೊಂಡಾಗ, ಬೆಳಿಗ್ಗೆ ಸಂಜೆ, ಯಾವುದಾದರೊಂದು ದೇವಾಲಯದಲ್ಲಿ ಪೂಜೆ ಮಾಡುವ ಕೆಲಸವೂ ಅವನದಾಗಿತ್ತು. ಅತಿ ಹೆಚ್ಚು ಮಾತನಾಡುತ್ತಿದ್ದ ಆತ, ತಾನು ಪೂಜೆ ಮಾಡುವ ದೇವರನ್ನು ಅತಿ ಹೆಚ್ಚು ’ಸತ್ಯವುಳ್ಳದ್ದು’ ಎಂದು ಹೇಳುತ್ತಿದ್ದ. ಮೆಳೆಯಮ್ಮನನ್ನು ಪೂಜೆ ಮಾಡುವಾಗ ’ಮೆಳೆಯಮ್ಮ ಸತ್ಯವುಳ್ಳ ದೇವತೆ’ ಎನ್ನುತ್ತಿದ್ದರೆ, ರಂಗನಾಥಸ್ವಾಮಿಯನ್ನು ಪೂಜಿಸುವ ದಿನಗಳಲ್ಲಿ ’ರಂಗನಾಥಸ್ವಾಮಿಯೇ ಹೆಚ್ಚು ಸತ್ಯವುಳ್ಳ ದೇವರು’ ಎನ್ನುತ್ತಿದ್ದ. ಅವನ ಕೆಲವೊಂದು ಅಸಂಗತ ವಿಚಾರಗಳನ್ನು ನಾನಿಲ್ಲಿ ಹೇಳಬಯಸುತ್ತೇನೆ.

 

ಮೆಳೆಯಮ್ಮ ಅಲ್ಲಿ ಪ್ರತಿಷ್ಠಾಪನೆಯಾಗಿದ್ದಕ್ಕೆ ಆತ ಹೇಳುತ್ತಿದ್ದ ಕಥೆ ಹೀಗಿದೆ. ಒಂದು ದಿನ ತಂದೆ ಮತ್ತು ಮಗ ಸಂತೆಗೆ ಗಾಡಿಯಲ್ಲಿ ಹೋಗಿ ಹಿಂದಕ್ಕೆ ಬರುತ್ತಿದ್ದರು. ಆಗ ಗಾಡಿಯ ಒಂದು ಗುಜ್ಜುಗೋಲು ಅಂದರೆ ಗಾಡಿಯ ಇಕ್ಕೆಲಗಳಲ್ಲಿರುವ ತಡಿಕೆಗೆ ಆಧಾರವಾಗಿರುವ ಕೋಲು ಬಿಗಿಯಾಗಿರದೆ ಮತ್ತೆ ಮತ್ತೆ ಕಳಚಿಹೋಗುತ್ತಿತ್ತಂತೆ. ಆಗ ಅದನ್ನು ಭದ್ರಪಡಸಲು ಅವರು ಒಂದು ಕಲ್ಲನ್ನು ಗಾಡಿಯಲ್ಲೇ ಇಟ್ಟುಕೊಂಡು ಸಂತೆಯಿಂದ ವಾಪಸ್ಸು ಬರುತ್ತಿದ್ದರಂತೆ. ಈಗ ಗುಡಿಯಿರುವ ಜಾಗದಲ್ಲಿ ಅಗಾಧವಾದ ಮೆಳೆ ಎಂದರೆ ಪೊದೆ ಇತ್ತಂತೆ. ಅಲ್ಲಿ ಬರುವಾಗ, ಗಾಡಿಯಲ್ಲಿದ್ದ ಕಲ್ಲು ಕೆಳಗೆ ಬಿದ್ದು ಹೋಯಿತಂತೆ. ಅದನ್ನು ಮತ್ತೆ ತೆಗೆದುಕೊಳ್ಳಲು ಹೋದರೆ ಅದು ಕೈಗೆ ಬರಲಿಲ್ಲವಂತೆ! ಕಣ್ಣ ಮುಂದೆಯೇ ನೆಲ್ಲಕ್ಕೆ ಬಿದ್ದ ಕಲ್ಲನ್ನು ಎತ್ತಿಕೊಳ್ಳಲು ಹೋದರೆ ಅದು ಬರುತ್ತಿಲ್ಲವೆಂದರೆ, ’ಅದರಲ್ಲಿ ಏನೋ ಶಕ್ತಿಯಿರಬೇಕು’ ಎಂದು ಆ ಕಲ್ಲನ್ನು ಪೂಜಿಸಿ ಹೋದರಂತೆ! ಸುತ್ತಲೂ ಮೆಳೆಯಿದ್ದುದರಿಂದ ಅದಕ್ಕೆ ಮೆಳೆಯಮ್ಮ ಎಂಬ ಹೆಸರಾಯಿತಂತೆ! ಈಗ ಮೆಳೆಯಮ್ಮನೆಂದು ಪೂಜಿಸುವುದು ಯಾವುದೇ ಶಿಲ್ಪವನ್ನಲ್ಲ; ಆಕಾರವಿಲ್ಲದ ಒಂದು ಕಲ್ಲನ್ನು!

ಈ ಮೆಳೆಯಮ್ಮ ರಕ್ತದೇವತೆ. ಕುರಿ, ಕೋಳಿ, ಹಂದಿಗಳನ್ನು ಮೆಳೆಯಮ್ಮನಿಗೆ ಬಲಿ ಕೊಡಲಾಗುತ್ತದೆ. ಹಾಗೆ ಬಲಿಕೊಟ್ಟ ಪ್ರಾಣಿಗಳ ಮಾಂಸದಿಂದ ಅಡುಗೆ ಮಾಡಿ ಅದನ್ನು ಮೆಳೆಯಮ್ಮನಿಗೆ ’ಎಡೆ’ ಇಟ್ಟು ಪೂಜಿಸಿ ಹೋಗುವ ಸಂಪ್ರದಾಯವಿದೆ. ಹೀಗೆ ಮಾಂಸಾಹಾರಿಯಾದ ದೇವರನ್ನು, ಮಾಂಸವನ್ನೇ ತಿನ್ನದ, ತಿನ್ನುವವರನ್ನು ಕಂಡರೆ ಹೇಸಿಕೊಳ್ಳುವ ಪೂಜಾರಿಗಳು ಪೂಜಿಸುವುದು ಮಾತ್ರ ವಿಚಿತ್ರ! ನಾವು ಯಾವಾಗಲಾದರೂ ಮಲ್ಲಿಕಾರ್ಜುನನ್ನು ರೇಗಿಸಲು ಈ ವಿಷಯ ಪ್ರಸ್ತಾಪಿಸಿದರೆ ಆತ ಅದಕ್ಕೊಂದು ಕಥೆ ಹೇಳುತ್ತಿದ್ದ. ಮೆಳೆಯಮ್ಮ ನಿಜವಾಗಿಯೂ ಮಾಂಸವನ್ನು ಬಯಸುವುದಿಲ್ಲವಂತೆ! ಆ ಮಾಂಸದ ಎಡೆ ಏನಿದ್ದರೂ ಮೆಳೆಯಮ್ಮನ ಭೂತಗಳಿಗಂತೆ! ಮೆಳೆಯಮ್ಮನ ಗುಡಿಯೆದುರು ಮೆಳೆಯಮ್ಮನ ಭೂತಗಳು ಎಂದು ಕರೆಯುವ ಏಳೆಂಟು ಕರಿಯ ಕಲ್ಲಿನ ಗುಂಡುಗಳು ಆತನ ಮಾತಿಗೆ ಸಾಕ್ಷಿಯಾಗಿದ್ದವು. ಆ ಕಲ್ಲಿನ ಗುಂಡುಗಳಿಗಿಂತ ಮುಂದಕ್ಕೆ ಅಂದರೆ ಮೆಳೆಯಮ್ಮನ ಗುಡಿಯ ಆವರಣದೊಳಕ್ಕೆ ಮಾಂಸದ ಎಡೆಯನ್ನು ತೆಗೆದುಕೊಂಡು ಹೋಗುವಂತಿರಲಿಲ್ಲ.

Imprint

Publisher: BookRix GmbH & Co. KG Sonnenstraße 23 80331 Munich Germany

Text Copyright Holder: Dr. B.R. Satyanarayana
Proofreading and Editing by: Satyanarayana
Release Date: 08-04-2014
ISBN: 978-3-7368-2989-3

All Rights Reserved

Dedication:
ತೇಜಸ್ವಿಗೆ

Next Page
Page 1 /