Cover

1. ಚಂಡಶಾಸನ ವೃತ್ತಾಂತ

ಮಾವಿಂಗೆ ಮಾಲ್ಲಿಗೆಗಳ್ ಕೂರ್ತಡೆ, ಮಾವು ಕೂರ್ತುದು ವಸಂತಶ್ರೀಗೆ- ಅನಂತನಾಥ ಪುರಾಣ : ಜನ್ನ

 

ಸಹೃದಯರೆ, ನಾನು ಕಾಲ.  ವ್ಯಂಗದಿಂದಲೋ, ಗೌರವದಿಂದಲೋ ಕೆಲವರು ನನ್ನನ್ನು ಕಾಲರಾಯನೆಂದು ಕರೆಯುತ್ತಾರೆ.  ಈಕೆ ಸೃಷ್ಟಿ.  ನನ್ನ ಸಹೋದರಿ.  ಈಕೆಯ ಗರ್ಭದಿಂದುದಯಿಸಿದ ಒಳಿತು ಕೆಡುಕುಗಳನ್ನು ನಾನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತೇನೆ.  ನಿರಂತರ ಸೃಷ್ಟಿಕಾರ್ಯದಲ್ಲಿ ನಿರತಳಾದ ಇವಳಿಗೆ ವರ್ತಮಾನದಲ್ಲಿ ಹೆಜ್ಜೆ, ಭವಿಷ್ಯದಲ್ಲಿ ದೃಷ್ಟಿ.  ಭೂತದ ಕಡೆಗೆ ನೋಡಲಿವಳಿಗೆ ಸಮಯವಾಗಲಿ, ಸಹನೆಯಾಗಲಿ ಇಲ್ಲ.  ನಿರಂತರತೆಯಲ್ಲೊಮ್ಮೆ ಬಿಡುವು ಬೇಸರಗಳಾದಾಗ ನನ್ನ ಬಳಿಬಂದು ‘ಕಾಲರಾಯ ಒಂದಿಷ್ಟು ಇತಿಹಾಸವನ್ನಾದರು ಹೇಳು’ ಎಂದು ದಂಬಾಲು ಬೀಳುತ್ತಾಳೆ.  ತನ್ನ ಗರ್ಭದಲ್ಲಿಯೇ ಅಗಣಿತ ವ್ಯಾಪಾರಗಳನ್ನಿಟ್ಟುಕೊಂಡಿರುವ ಇವಳಿಗೆ, ತಾನೇ ಪ್ರಸವಿಸಿದ ಇತಿಹಾಸವನ್ನು ಇಣುಕುವ ಚಪಲ  ನನ್ನ ಗರ್ಭದಲ್ಲಿಳಿದು.  ನಾನೂ ಒಪ್ಪಿದ್ದೇನೆ. ನಿಮ್ಮನ್ನೂ ಕರೆದಿದ್ದೇನೆ. ಈಕೆಯೊಬ್ಬಳಿಗೆ ನಾನು ಕಥೆ ಹೇಳಿದರೆ ಆಗುವ ಶ್ರಮ ಮತ್ತು ಸಾರ್ಥಕತೆ ನಿಮಗೆ ಹೇಳುವುದರಿಂದ ಹೆಚ್ಚೇನು ಆಗುವುದಿಲ್ಲ.  ಒಮ್ಮೊಮ್ಮೆ ಸಾರ್ಥಕತೆಯ ತೂಕ ಹೆಚ್ಚಾಗುತ್ತದೆಯಾದರೂ, ಇಂದು ಇತಿಹಾಸದಿಂದ ಪಾಠ ಕಲಿಯುವವರೆಷ್ಟು ಮಂದಿ ಇದ್ದಾರೆ ಹೇಳಿ.  ಇತಿಹಾಸವೆಂಬುದು ರಂಜನೆಯ ವಸ್ತುವಾಗಿದೆ.  ವರ್ತಮಾನದಲ್ಲಿ ನಿಂತು, ಭೂತವನ್ನು ಮರೆತು, ಭವಿಷ್ಯವನ್ನು ನೋಡುತ್ತಿರುವ ಈಕೆಯ ಗರ್ಭಸಂಜಾತರಿಗೆ!

ಸೃಷ್ಟಿ ಕೇಳು, ನೀನು ಈಗಿನ ನಿನ್ನ ಇರುವಿಕೆಯಿಂದ ‘ನಾನೆಷ್ಟು ಸುಂದರಿ’ ಎಂದು ಅಹಂಕಾರ ಪಡುತ್ತಿದ್ದೀಯ. ನಿನ್ನೊಳಗೇನಿದೆಯೆಂಬುದೇ ನಿನಗೆ ಗೊತ್ತಿಲ್ಲ.  ಪ್ರಸವದ ನಂತರ ತಿರುಗಿ ನೋಡದ ನಿನಗೆ, ನೀನು ಪ್ರಸವಿಸಿ ನನ್ನ ತೆಕ್ಕೆಗೆ ಬಂದ ‘ವಸ್ತು’ ಏನೆಂಬುದು ತಿಳಿಯುವುದೇ ಇಲ್ಲ.  ನೀನು ಪ್ರಸವಿಸಿದ್ದೆಲ್ಲವೂ ಒಳಿತಲ್ಲ, ಕೆಡಕೂ ಇದೆ; ಸುಂದರವಲ್ಲ, ಕುರೂಪವೂ ಇದೆ; ಸತ್ಯವಲ್ಲ, ಅಸತ್ಯವೂ ಇದೆ.  ಇದು ಎಲ್ಲ ಕಾಲಕ್ಕೂ ಇದ್ದದ್ದೆ.  ಆದರೆ ಈ ವರ್ತಮಾನದ ಮಕ್ಕಳು ಅವಘಡಗಳು ನಡೆದಾಗ, ‘ಕೆಟ್ಟಕಾಲ’ ’ಕಲಿಗಾಲ’ ’ಕಾಲದ ಮಹಿಮೆ’ ಮುಂತಾಗಿ ಉದ್ಗರಿಸುತ್ತಾರೆ.  ಪಾಪ! ಇವರಿಗೆ ಗೊತ್ತಿಲ್ಲ. ಇವರಂದುಕೊಂಡಿರುವ ಈ ನಾಗರೀಕತೆಯ ಒಂದೊಂದು ಪೊರೆ ಕಳಚಿದಾಗಲೂ ಬದಲಾಗುತ್ತಿರುವುದು ಅದರ ಹೊರಮೈಯಷ್ಟೇ ಎಂದು.  ಅದರ ಸುಪ್ತಮನಸ್ಸಿನಾಳದಲ್ಲಿರುವ ಈ ಒಳಿತು ಕೆಡಕುಗಳು ವಾಸನಾರೂಪದಲ್ಲಿ ಉಳಿದುಬಿಡುತ್ತವೆ ಎಂದು.

ಸೃಷ್ಟಿ, ಈಗ ಹೇಳುತ್ತೇನೆ ಕೇಳು. ಪುರಾಣವೋ, ಇತಿಹಾಸವೋ ಅದು ಒತ್ತಟ್ಟಿಗಿರಲಿ.  ಪುರಾಣದೊಳಗಿನ ಇತಿಹಾಸ, ಇತಿಹಾಸದೊಳಗಿನ ಪುರಾಣ ಅದೂ ನನಗೆ ಸಂಬಂಧಿಸಿದ್ದಲ್ಲ.  ನನ್ನ ಪ್ರಕಾರ ಈ ಕ್ರಿಯೆಗೆ ಹಿಂದು, ಇಂದು ಮತ್ತು ಮುಂದು ಎಂಬ ವಿಶೇಷಣಗಳೇ ಬೇಡ.

ಬಾ ಸೃಷ್ಟಿ, ಇತ್ತ ಬಾ. ನನ್ನೊಳಗೆ ಇಣುಕಿ ನೋಡು. ಅದೋ ಅಲ್ಲಿ ನೋಡು.  ಕಾಣಿಸುತ್ತದೆಯೆ ಇದು ಯುದ್ಧಭೂಮಿ.  ಬೆಳಗಿನಿಂದ ಸಂಜೆಯವರೆಗೂ ಪ್ರಾಣದ ಹಂಗು ತೊರೆದು ಹೋರಾಡಿದ ಸೈನಿಕರು ನಿದ್ರಾಮಾತೆಯ ಮಡಿಲಲ್ಲಿದ್ದಾರೆ.  ಗಾಯಗೊಂಡ ಯೋಧರಿಗೆ ಉಪಚಾರವೂ ನಡೆದಿದೆ.  ಸಾಕಷ್ಟು  ಬೆವೆರಿಳಿಸಿದ ಆನೆ ಕುದುರೆಗಳು ವಿಶ್ರಾಂತಿಯನ್ನುಣ್ಣುತ್ತಿವೆ.  ಇದೆಲ್ಲಾ ಆ ಸೂರ್ಯದೇವನ ಕೃಪೆ ನೋಡು.  ಹೆಣ್ಣು, ಹೊನ್ನು ಮತ್ತು ಮಣ್ಣು ಇಂತದ್ದಕ್ಕೆಲ್ಲಾ ಲಜ್ಜಾಹೀನರಾಗುವ ರಾಜರು, ಕಾನೂನು ಕಟ್ಟಳೆಗಳನ್ನು ಮುರಿದರೂ, ಸೂರ್ಯ ಮುಳುಗಿದ ಮೇಲೆ ಯುದ್ಧ ನಿಲ್ಲಿಸಿಬಿಡುತ್ತಾರೆ.  ಇದು ಯುದ್ಧದ ಕಟ್ಟಳೆಗಳ ಬಗ್ಗೆ ಅವರಿಗಿರುವ ನಿಷ್ಟೆಗಿಂತ, ನಾಳೆ ಮತ್ತೆ ಕಚ್ಚಾಡಲು ಶಕ್ತಿ ಸಂಚಯಮಾಡಲಿಕ್ಕೆ ಮಾಡಿಕೊಂಡಿರುವ ಸಂಚು.  ಅದನ್ನೇ ಅವರು ಕಾನೂನು, ಕಟ್ಟಳೆ, ಯುದ್ಧವಿಧಿವಿಧಾನಗಳೆಂದು ಹೇಳುತ್ತಾರೆ.  ಆದರೆ ಅದನ್ನೂ ಮುರಿದ ‘ವೀರ ಯೋಧ’ರು ನನ್ನ ತೆಕ್ಕೆಯಲ್ಲಿದ್ದಾರೆ.  ಅದಿರಲಿ, ಇಲ್ಲಿ ಕೇಳು.  ಅಲ್ಲಿ ಪಂಜುಗಳುರಿಯುತ್ತಿರುವ ಬಿಡಾರವನ್ನು ನೋಡು.  ರಾತ್ರಿಕಾವಲೂ ಇದೆ.  ಬಿಡಾರದೊಳಗೆ ಅತ್ತಿಂದಿತ್ತ ತಿರುಗುತ್ತಿರುವವನು ವಸುಷೇಣ. ಸುರಮ್ಯ ದೇಶದ ಅರಸು.  ಈಗ ಈತನ ಯುದ್ಧ ಈ ಮಕರಗ್ರಾಹಪುರದ ಅರಸು ಚಂಡಶಾಸನ ಮೇಲೆ.  ಕಾರಣ! ನಾನು ಹೇಳುವುದಕ್ಕಿಂತ ನೀನೆ ತಿಳಿಯುವುದು ಉತ್ತಮ. ಹೋಗು, ಸ್ವಲ್ಪ ಹೊತ್ತು ಈತನ ಮಾನಸಸರೋವರದಲ್ಲಿ ವಿಹರಿಸಿ ಬಾ.  ನಾನಿಲ್ಲಿಯೇ ಕಾಯುತ್ತಿರುತ್ತೇನೆ.

* * *

ನಾನು ಯಾರು? ನಾನು ಯಾರು? ಭರತವರ್ಷದ ಸುರಮ್ಯ ದೆಶದ ಅರಸು.  ಪೌದನಪುರವರಾಧೀಶ್ವರ ವಸುಷೇಣ.  ನನ್ನಂತವನ ವಿಷಯದಲ್ಲೂ ಹೀಗಾಗಬೇಕೆ? ಲತೆಯೆಂದು ಅಪ್ಪಿದ್ದು ಹಾವಾಗಿ ಕಚ್ಚಬೇಕೆ?  ಅ ಹಾವು ಕಚ್ಚಿ ಮೈಯೆಲ್ಲಾ ವಿಷವೇರುತ್ತಿದೆ.  ಅದು ನನ್ನ ಮೈಯನ್ನು ಪೂರ್ಣ ಆವರಿಸುವ ಮುನ್ನ ಆ ಜಂತುವನ್ನು ಹಿಡಿದು ಈ ವಿಷವನ್ನು ಇಳಿಸಬೇಕು. ಇಲ್ಲ, ಅದನ್ನು ಕೊಲ್ಲಬೇಕು.  ಛೇ! ಈ ಸೂರ್ಯ ಇನ್ನೊಂದೆರಡು ಗಳಿಗೆ ತಡವಾಗಿ ಅಸ್ತಮಿಸಬಾರದೆ.  ಇಂದೇ ಆ ಕ್ಷುದ್ರಜಂತುವನ್ನು ಇಲ್ಲವಾಗಿಸಿಬಿಡುತ್ತಿದ್ದೆ. 

ಏನೆಲ್ಲಾ ಆಯಿತು ಈ ಐದು ದಿನಗಳಲ್ಲಿ. ಒಂದೇ ಗುರುವಿನ ಶಿಷ್ಯರಿಬ್ಬರಲ್ಲಿ ನಾಳೆ ಒಬ್ಬ ಸಾಯಬೇಕು, ಇನ್ನೊಬ್ಬನಿಂದ.  ಇದು ನನ್ನ ಕನಸು ಮನಸುಗಳಲ್ಲೂ ಸುಳಿದಿರದ ಕಲ್ಪನೆ.  ಆದರಿಂದು ವಾಸ್ತವವಾಗಿ ಬಂದು ನನ್ನೆದುರೇ ನಿಂತು ನನ್ನನ್ನೇ ಅಣಕಿಸುತ್ತಿದೆ.

ಓ ಚಂಡಶಾಸನ, ನನ್ನ ಪ್ರಿಯಮಿತ್ರ ಚಂಡಶಾಸನ.  ನೀನೇಕೆ ಹೀಗೆ ಮಾಡಿದೆ?  ಒಂದು ವಾರದ ಕೆಳಗೆ ನಿನ್ನಾಳೊಬ್ಬ ಬಂದು, ‘ಮಕರಗ್ರಾಹಪುರವರಾಧೀಶ್ವರ ಚಂಡಶಾಸನದೇವರು ನಿಮ್ಮನ್ನು ಕಾಣಲು ನಾಳೆ ಬರುವವರಿದ್ದಾರೆ’ ಎಂದಾಗ ನಾನೆಷ್ಟು ಸಂತೋಷಪಟ್ಟಿದ್ದೆ.  ಆ ಖುಷಿಯಲ್ಲಿ  ನನ್ನ ಕೊರಳಲಿದ್ದ ಆಭರಣವನ್ನೇ ಉಡುಗೊರಯಾಗಿ ಕೊಟ್ಟಿದ್ದೆ.    ನನ್ನೆಲ್ಲಾ ಅರಮನೆಯ,  ಅಂತಃಪುರದ ಜನಕ್ಕೆಲ್ಲಾ ನಿನ್ನ

ಸ್ವಾಗತಕ್ಕೆ ಸಿದ್ದರಾಗುವಂತೆ ಆಜ್ಞೆ ಮಾಡಿದ್ದೆ.  ಇಡೀ ಪೌದನಪುರವನ್ನೇ ನಿನ್ನ ಸ್ವಾಗತಕ್ಕೆ  ಸಿದ್ಧಪಡಿಸಲು ನನ್ನಂತರಂಗದ ಜನಕ್ಕೆ ತಿಳಿಸಿದ್ದೆ.  ಏಕೆ ಹೇಳು? ಆರು ವರ್ಷಗಳ ನಂತರ, ಜೊತೆಯಲ್ಲೇ ದೂಳಾಟವಾಡಿದ್ದ ಬಾಲ್ಯ ಸ್ನೇಹಿತರಿಬ್ಬರು, ಒಂದೇ ಗುರುವಿನ ಶಿಷ್ಯರಿಬ್ಬರು, ನೆರೆಹೊರೆ ರಾಜ್ಯಗಳ ರಾಜರಿಬ್ಬರು ಆರು ವರ್ಷಗಳ ನಂತರ ಮತ್ತೆ ಬೇಟಿಯಾಗುತ್ತಿದ್ದೆವು.  ಚಂಡಶಾಸನ ನಿನಗೆ ನೆನಪಿದೆಯೋ, ಇಲ್ಲವೊ? ನಾವಂದು ಗುರುಕುಲದಿಂದ ಹೊರಟು ನಿಂತಾಗ, ಪ್ರತಿವರ್ಷಕ್ಕೊಮ್ಮೆ ನಾವಿಬ್ಬರು ಸೇರಿ ವಾರವಿಡೀ ಕ್ರೀಡಾವಿಲಾಸಗಳಲ್ಲಿ, ಜಲಕೇಳಿಗಳಲ್ಲಿ, ಮೃಗಕಥಾವಿನೋದಗಳಲ್ಲಿ ವಿಹರಿಸಬೇಕೆಂದು ಮಾತನಾಡಿಕೊಂಡಿದ್ದೆವು.  ಅಲ್ಲಿಂದ ಬಂದು ತಿಂಗಳೆರಡರಲ್ಲಿ ನನ್ನ ಪಟ್ಟಾಭಿಷೇಕ. ನಂತರ ಮದುವೆ.   ನೀನು ಮದುವೆಗೆ ಬರಲೊಪ್ಪಿದ್ದೆ.  ಆದರೆ ನಿನ್ನ ದೇಶದ ದಕ್ಷಿಣದಲ್ಲಿ ಎದ್ದ ದಂಗೆಯಿಂದಾಗಿ ನೀನು ಬರುವುದಿಲ್ಲವೆಂದು ತಿಳಿದಾಗ ನಾನೆಷ್ಟು ಅವಲತ್ತುಕೊಂಡಿದ್ದೆ.  ನಿಜ, ಮೊದಲು ಕರ್ತವ್ಯ.  ನೀನೂ ಒಂದು ದೇಶದ ಅರಸು.   ಎಲ್ಲಾ ಸರಿಯಾಗಿ ಒಂದು ಸ್ಥಿತಿ ತಲುಪಿದಾಗ ಬರುವುದಾಗಿ ನೀನು ತಿಳಿಸಿದ್ದೆ.  ಅದಕ್ಕಾಗಿ ನಾನು ಆರು ವರ್ಷಗಳೇ ಕಾಯಬೇಕಾಯಿತು, ಮಿತ್ರ ಆರು ವರ್ಷಗಳು.

ಬಂದೆ. ನೀನು ಮಹೋತ್ಸವದಿಂದ ಪುರಪ್ರವೇಶ ಮಾಡಿದ್ದೆ ನಿನ್ನ ನರ್ಮಸಚಿವ ಸುದರ್ಶನನೊಂದಿಗೆ.  ನಾವಿಬ್ಬರು ಆಲಂಗಿಸಿದೆವು. ಅಭಿನಂದಿಸಿದೆವು.  ಆನಂದಿಸಿದೆವು. ಎರಡು ಘನಗಜಗಳನ್ನೇರಿ ಮೆರವಣಿಗೆಯಲ್ಲಿ ಅರಮನೆಗೆ ಬಂದೆವು.  ಎಲ್ಲವೂ ನಾನಂದುಕೊಂಡಂತೆಯೇ ಆಯಿತು.  ಸ್ವತಃ ದೇವಿ ಸುನಂದೆಯೇ ಆರತಿಯೆತ್ತಿ ನಮ್ಮನ್ನು ಸ್ವಾಗತಿಸಿದಳು.

ಮೊದಲೆರಡು ದಿನಗಳು ನಡೆದ ಸಹಪಂಕ್ತಿ ಬೋಜನ, ಸಹವಿಳಾಸಕ್ರೀಡೆಗಳನ್ನು ನಾನು ಹೇಗೆ ಮರೆಯಲಿ.   ನಂತರ ನೀನ್ನಲ್ಲಿ ಸ್ವಲ್ಪ ಅನ್ಯಮನಸ್ಕತೆಯನ್ನು ಕಂಡೆ.  ತನ್ನ ನಾಡಿನಿಂದ ದೂರವಿರುವುದಕ್ಕೆ ಇರಬೇಕೆಂದುಕೊಂಡೆ.  ಆದರೆ ನಾಳೆಗೆ ನಡೆಸಲು ಯೋಜಿಸಿದ್ದ  ಮೃಗಬೇಟೆಯ ವಿನೋದದ ಸುಖದ ಕಲ್ಪನೆಯಲ್ಲಿ ನಾನಿದ್ದೆ. ಇದು ನಿನಗೆ ಖುಷಿಕೊಡುತ್ತದೆಯೆಂದು ಭಾವಿಸಿ ಸುಮ್ಮನಾದೆ.  ಕಾಡಿನಲ್ಲಿ  ಮೃಗವೊಂದನ್ನು ಬೆನ್ನಟ್ಟಿ ನಾವಿಬ್ಬರೂ ದೂರವಾಗಿದ್ದೆವು. ನನಗೆ ಬೇಟೆ ಸಿಗಲಿಲ್ಲ. ಆದರೆ, ಆದರೆ,,,.. ..

* * *

ನೋಡಿದೆಯಾ ಸಹೋದರಿ, ಈ ಮನುಷ್ಯನಂತರಂಗವನ್ನು.  ಕ್ರೋಧದ ಕೆಸರಿನಿಂದ ತನ್ನಮನದ ನೈರ್ಮಲ್ಯವನ್ನು ಕಳೆದುಕೊಂಡುಬಿಟ್ಟಿದ್ದಾನೆ.  ಈಗ ನೀನು ಇನ್ನೊಬ್ಬನನ್ನು ನೋಡಬೇಕು. ಒಬ್ಬನಲ್ಲ ಇಬ್ಬರು. ಚಂಡಶಾಸನ ಮತ್ತು ಸುನಂದೆಯನ್ನು, ಅರಮನೆಯಲ್ಲಿ.  ನೋಡಲ್ಲಿ, ಆತ ಚಂಡಶಾಸನ.  ಅವನು ಸುನಂದೆಯನ್ನು ಅನುನಯಿಸುತ್ತಿದ್ದಾನೆ, ಕಾಡುತ್ತಿದ್ದಾನೆ.  ಇಲ್ಲ ಆತ ಅವಳನ್ನು ಬೇಡುತ್ತಿದ್ದಾನೆ.  ಹೋ, ಹೊರಟುಬಿಟ್ಟ.  ನಮ್ಮ ಬರುವು ಒಂದು ಕ್ಷಣ ತಡವಾಯಿತೆ? ಇರಲಿ, ಸೃಷ್ಟಿ ಈಗ ನೀನು ಈತನ ಮನೋಮಂದಿರವನ್ನು ಹೊಕ್ಕು ಅಲ್ಲಿನ ವ್ಯಾಪಾರವನ್ನು ಗ್ರಹಿಸು.  ಆತ ನಿದ್ರೆಯನ್ನಂತೂ ಮಾಡಲಾರ.  ಮನುಷ್ಯಪ್ರಾಣಿ ಏಕಾಂಗಿಯಾಗಿದ್ದಾಗ ನಿಷ್ಪಕ್ಷಪಾತವಾಗಿ ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾನೆ.  ಹೋಗಿ ಬಾ, ನಾನಿಲ್ಲಿಯೇ ಚಲಿಸುತ್ತಿರುತ್ತೇನೆ.

ಮುಂದುವರೆಯುತ್ತದೆ........

ಈ ವಿಧಿಯೆಂಬುದು ಎಷ್ಟು ನಿಷ್ಕರುಣಿ.  ಅವಳು ಇಷ್ಟೊಂದು ಹಠ ಮಾಡಲು ಈ ವಿಧಿಯೇ ಕಾರಣ.  ಇಂದಿನ ನನ್ನ, ಅವಳ ಸ್ಥಿತಿಗೆ ಈ ವಿಧಿಯಲ್ಲದೆ ಬೇರೇನೂ ಕಾರಣ ನನಗೆ ಕಾಣುತ್ತಿಲ್ಲ.  ಮನಸಿಜನ ಮಾಯೆ ವಿಧಿವಿಳಸನದ ನರಂಬಡೆಯೆ, ಕೊಂದು ಕೂಗದೆ ನರರನ್ನು.  ಓ ವಿಧಿಯೆ, ಈಕೆಯಷ್ಟು ಹಠಮಾರಿ.  ಹೆಣ್ಣೊಬ್ಬಳು ನನ್ನ ವಿಷಯದಲ್ಲಿ ಇಷ್ಟೊಂದು ಕಠಿಣಳಾಗುತ್ತಿರುವುದು ಇದೇ ಮೊದಲು.  ನಾನವಳನ್ನು ಪೌದನಪುರದರಮನೆಯಲ್ಲಿ ಕಂಡಾಗ ಅವಳು ಹೇಗಿದ್ದಳು.  ಚಂದ್ರೋದಯವಾಗಿತ್ತು ನನ್ನ ಮನದಂಗಳಕ್ಕೆ.  ಅವಳ ನಗೆ, ನಡೆ, ನುಡಿ ಸುರಸ್ತ್ರೀಯರನ್ನೂ ನಾಚಿಸಿದ್ದವು.  ಕಣ್ಗಳನ್ನು ಹಿಡಿದು ನಿಲ್ಲಿಸುವ ಹೂವಿನ ಕಾಂತಿ, ಗಂಧ, ಸುಗಂಧ.  ಓ ನಂದೆ, ನನ್ನ ಸುನಂದೆ ನೀನೆಷ್ಟು ಸುಂದರವಾಗಿದ್ದೆ, ಸರಸಳಾಗಿದ್ದೆ, ಸರಸಿಯಾಗಿದ್ದೆ.  

ಆದರೆ ಯಾವ ಗಳಿಗೆಯಲ್ಲಿ ನನ್ನ ಮನದೊಳಗೆ ಆ ಸ್ಮರನೊಕ್ಕನೋ?  ಅವಳನೆಗೆ ಕಾಮದರಗಿಣಿಯಾಗಿ ನನ್ನ ಹುಚ್ಚನನ್ನಾಗಿಸಿದ್ದಳಲ್ಲ.  ಆ ಆನಂದ, ಆ ಭಾವ ಉತ್ಕರ್ಷಗಳನ್ನು ಏನೆಂದು ಹೇಳಲಿ? ಕಡುನಂಟನ ಸತಿಯ ರೂಪು ಸೋಲಿಸಿತೆನ್ನನು, ಬೇಟೆಗಾರನ ಬಿಲ್ಲಿನಿಂದ ಹೊರಟ ಬಾಣ ಹುಲ್ಲೆಯ ಕೊಂದಂತೆ. 

ಯಾರಲ್ಲಿಯೂ ಹೇಳಬಾರದ, ಹೇಳಲಾಗದ ಸ್ಥಿತಿ.  ಆದರೂ ಈ ಅಂತರಂಗದ ಮಿತ್ರರಿರುತ್ತಾರಲ್ಲ, ನರ್ಮಸಚಿವರು!  ಇವರು ರಾಜರ ಪತನಕ್ಕೆ ಘೋರಿ ತೋಡುವ ಸ್ಮಶಾಣರುದ್ರರು! ಸುದರ್ಶನ, ಆಗ ನೀನು ಏನೆಂದು ಹೇಳಿದೆ? ‘ಸುನಂದೆಯೂ ನಿನ್ನನ್ನು ಕೂಡುವ ಭಾವದಿಂದ ನೋಡುತ್ತಾಳೆ’ ಎಂದು ನನ್ನ ಕಾಮಾಗ್ನಿಗೆ ತುಪ್ಪವನ್ನು ಸುರಿದುಬಿಟ್ಟೆಯಲ್ಲ.  ನೀನು ಹೇಳಿದ್ದೇ ನಿಜವಾಗಿದ್ದರೆ ಇಲ್ಲಿ ಇವಳೇಕೆ ಇಷ್ಟು ಹಠ ಮಾಡುತ್ತಿದ್ದಾಳೆ?  ನೀನು ಸುಳ್ಳಾಡಿದ್ದೆ.  ಅವಳನ್ನು ಕದ್ದು ತಂದು ನಾನು ಮಿತ್ರದ್ರೋಹಿಯಾದೆ! ನನ್ನ ಪಥನಕ್ಕೆ ನಾಂದಿ ಹಾಡಿ ನೀನೂ ಮಿತ್ರ ದ್ರೋಹಿಯಾದೆ!

ಬೇಟೆಗೆಂದು ಹೋದಾಗ ಸಂದರ್ಭವೂ ನನಗೆ ಅನುಕೂಲವಾಗಿ ವಿಧಿಯೂ ತನ್ನ ಬೇಳೆ ಬೇಯಿಸಿಕೊಂಡಿತಲ್ಲ!  ಇವಳಿಗಾಗಿ, ಈ ಸುನಂದೆಗಾಗಿ ಮಿತ್ರ ದ್ರೋಹ ಮಾಡಿದೆ.  ಸ್ವಾಮಿನಿಷ್ಟ ಸಿಂಹಚೂಡನ ಕೊರಳ ಕೊಯ್ದೆ.  ನನ್ನ ಕೀರ್ತಿಪತಾಕೆಯನ್ನು ಕೆಳಕ್ಕೆ ಕೆಡವಿದೆ.  ನರಕದಲ್ಲಿ ಸ್ಥಳ ಕಾಯ್ದಿರಿಸಿಕೊಂಡೆ.  ಯಾವ ಮಿತ್ರನನ್ನು ಆಲಂಗಿಸಿ ಮೈದಡವಬೇಕಾಗಿತ್ತೋ ಅದೇ ಕೈಯಲ್ಲಿ, ಅದೇ ಮಿತ್ರನ ಮೇಲೆ ಯುದ್ಧಮಾಡಬೇಕಾಗಿದೆ.  ಇದರಿಂದಲೂ ನಿನಗೆ ತಿಳಿಯುತ್ತಿಲ್ಲವೆ.  ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು! 

ಸುನಂದೆ, ದೇವಿ ಸುನಂದೆ,  ನಾನದೆಷ್ಟು ಪ್ರಲೋಭನೆಗಳನ್ನು ಒಡ್ಡಿದೆ?  ನೀನು ಸೋಲಲಿಲ್ಲ. ನಿಜವಾಗಿಯೂ ನೀನು ವಸುವನ್ನು ಅಷ್ಟೊಂದು ಪ್ರೀತಿಸುತ್ತೀಯ?  ನಾನು ಅವನಿಗಿಂತ ಯಾವುದರಲ್ಲಿ ಕಡಿಮೆ ಹೇಳು?  ದೇವಿ, ನನಗೆ ನನ್ನ ಕೀರ್ತಿ ಕಪ್ಪಾದ ಭಯವಿಲ್ಲ. ವಸುವಿನ ಭಯವಿಲ್ಲ. ನನಗೆ ನಿನ್ನದೇ ಭಯ!  ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲು ಭಯವಾಗುತ್ತಿದೆ.

ವಸುವಿನ ಮೇಲಿನ ಪ್ರೀತಿಯೋ, ಇಲ್ಲ ಈ ವಯಸ್ಸಿಗೇ ವೈರಾಗ್ಯವೋ. ನಾನು ನಿನ್ನನ್ನು ಹೊತ್ತು ತರುವಾಗ ನೀನೇನು ಹೇಳಿದೆ? 

‘ಹಾಳು ಮನೆಯಲ್ಲಿ ತುಪ್ಪದ ಮಡಕೆಯನ್ನು ಹುಡುಕುವ ನಾಯಿ’ ಎಂದೆ.  ಬಯ್ದೆ.  ಅಥವಾ ಸಂಪದ್ಭರಿತವಾಗಿದ್ದ ಮನೆ ಮನಸ್ಸು ನನ್ನ ಸ್ಪರ್ಶಮಾತ್ರದಿಂದಲೇ ಹಾಳಾಯಿತೆ?  ಆದರೂ ನನ್ನನ್ನು ಕಂಡಾಗ, ತನ್ನತ್ತಲೇ ಬೀಳುತ್ತಿರುವ ತುಪ್ಪದ ಕಡೆಗೆ ನುಗ್ಗುವ ಬೆಂಕಿಯ ಜ್ವಾಲೆಗಳಂತೆ ಉರಿದು ಬೀಳುತ್ತೀಯ.  ಅಂದರೆ, ಅಂದರೆ ನೀನಿನ್ನೂ ಖಾಲಿಯಾಗಿಲ್ಲ.

ನೀನು ನನ್ನನ್ನು ‘ದೋಷಕಾರ’ ಎಂದೆ.  ಕೋಪವಿಲ್ಲ ದೇವಿ ನನಗೆ.  ಕಮಲೆ ದಿನಕರನಿಗೆ ಮೊಗವೊಡ್ಡಬಹುದು. ಆದರೆ ದೋಷಕಾರನಿಗೆ ಆ ಅಗಾದ ಜಲರಾಶಿಯೇ ಮೊಗವೊಡ್ಡುವುದಿಲ್ಲವೆ?  ‘ಮಾವಿನ ಮರದಲ್ಲಿ ರಮಿಸುತ್ತದೆಯಲ್ಲದೆ, ಕೋಗಿಲೆ ಬೇವಿನಮರದಲ್ಲಿ ರಮಿಸುವುದಿಲ್ಲ’ ಎಂದೆ.  ಹೀಗೆ ಚುಚ್ಚು ಮಾತಿನಿಂದ ನೀನು ನನ್ನೇಕೆ ಕೊಲ್ಲುತ್ತಿದ್ದೀಯ?  ನೀನು, ನಿನ್ನ ಚೆಲುವು ನನ್ನ ಹೃದಯವನ್ನಷ್ಟೇ ಅಪಹರಿಸಿದಿರಿ.  ನಾನು ನಿನ್ನನ್ನೇ ಅಪಹರಿಸಿದೆ.  ಇಬ್ಬರೂ ಅಪರಾದಿಗಳಲ್ಲವೇ?

* * *

ಬಾ, ಸೃಷ್ಟಿ ಬಾ. ವಿಷಯ ತಿಳಿಯಿತಷ್ಟೆ.  ಬ್ರಾಹ್ಮೀ ಸಮೀಪಿಸುತ್ತಿದೆ.  ಎರಡು ದಿನಗಳಿಂದ ನಡೆದ ಊಹಿಸಲಸಾದ್ಯವಾದ ಘಟನೆಗಳಿಂದ ಜರ್ಜಳಿತಳಾಗಿ, ದೇಹಾಯಾಸದಿಂದ ವಿಸ್ಮೃತಿ ಹೋಗಿದ್ದ ಸುನಂದೆಯು ಈಗ ಎಚ್ಚರವಾಗಿದ್ದಾಳೆ.  ಅವಳ ಮನಸ್ಸಿನಲ್ಲಿ ದೊಡ್ಡ ಹೋರಾಟವೇ ನಡೆಯುತ್ತಿರಬೇಕು. ಅವಳ ಮನಸ್ಸಿನಲ್ಲಿರುವುದೇನೆಂದು ತಿಳಿದು ಬಾ. ಆಗ ನಿನಗೊಂದು ಪೂರ್ಣಚಿತ್ರಣ ದೊರೆಯಬಹುದು.

* * *

ಅಯ್ಯೋ ದೇವರೆ. ಏನೆಲ್ಲಾ ಆಗಿಹೋಯಿತು.  ನನ್ನ ಸ್ವಾಮಿ ಎಷ್ಟೊಂದು ನೊಂದನೋ ಏನೋ. ವಿಷಯವೊಂದು ತಿಳಿಯುತ್ತಿಲ್ಲ.  ನೆನ್ನೆ ಹೊರಗೆ ಯುದ್ಧದ ಕೋಲಾಹಲವಿತ್ತು.  ನನ್ನ ದೇವರೇ ಬಂದಿರಬೇಕು.  ಇಂದು ಖಂಡಿತ ನನ್ನ ಬಿಡುಗಡೆಯಾಗುತ್ತದೆಯಲ್ಲವೆ? ದೇವರೇ, ನಾನು ನನ್ನ ಸ್ವಾಮಿಯನ್ನು ಸೇರುವಂತಾದರೆ ಸಾಕು.  ಮತ್ತೆ ನಾನೇನ್ನೂ ನಿನ್ನಲ್ಲಿ ಬೇಡುವುದಿಲ್ಲ. 

ಈ ಪಾಪಿಯು ಎಂಥ ನೀಚ ಕೆಲಸಕ್ಕೆ ಕೈ ಹಚ್ಚಿದ್ದಾನೆ.  ಅರಮನೆಗೆ ಬಂದ ಮೊದಲ ದಿನದಿಂದಲೇ ಈ ನಾಯಿಯ ನೋಟದಲ್ಲಿ ಅಸಹಜತೆಯನ್ನು ಕಂಡೆ.  ಮನಸ್ಸು ಕೇಡನ್ನು ಶಂಕಿಸಿತ್ತಾದರೂ, ಸುರಮ್ಯಪತಿ ವಸುಷೇಣನ ಕಡುನಂಟನಾದ್ದರಿಂದ ಅಪಾಯವಿಲ್ಲವೆಂದುಕೊಂಡೆ.  ಮೊನ್ನೆ ನನ್ನವರು ವನಭೋಜನದ ವ್ಯವಸ್ಥೆಗೆ, ಸ್ವತಃ ನನ್ನನ್ನೇ ಬರಲು ಹೇಳಿದಾಗ ಅನುಮಾನಿಸುತ್ತಲೇ ಹೋದೆ.  ಆಗ ಆಗಿದ್ದೇನು?  ಈ ಪಾಪಿ ತನ್ನ ನೀಚ ಕೈಗಳಿಂದ ನನ್ನ ತೋಳು ತೊಡೆಗಳನ್ನು ಹಿಡಿದು, ಎತ್ತಿ ರಥದಲ್ಲಿ ಹಾಕಿಕೊಂಡು ಹೊರಟನಲ್ಲ.  ಆಗಲೇ ನನ್ನ ಸರ್ವಸ್ವವೆಲ್ಲಾ ಸೋರಿಹೋಯಿತು.  ಆತನಿಗೆ ಬೇಡಿಕೊಂಡೆ, ಕಾಲಿಡಿದುಕೊಂಡು. ‘ನಾನು ಪರಸ್ತ್ರೀ.  ನಿನ್ನ ಕಡುನಂಟನ ಸತಿ.  ನಿನ್ನ ಸವಸಹೋದರಿಯೆಂದುಕೊಂಡು ಕನಿಕರಿಸು.  ನಿನಗೆ ಇಹಪರದ ಭಯವಾದರೂ ಇಲ್ಲವೆ?’ ಹೀಗೆ ಇನ್ನು ಏನೇನೊ, ಪರಿಪರಿಯಾಗಿ ಬೇಡಿಕೊಂಡೆ.  ಬಡಬಡಿಸಿದೆ. ಬಯ್ದೆ. ಉಗಿದೆ.  ಆದರೂ ಪಾಪಿ ಕರಗಲಿಲ್ಲ.

ಜೊತೆಯಲ್ಲಿದ್ದ ಚಿತ್ರಲತೆ ಮತ್ತು ಮದನಪತಾಕೆಯರು ಏನೆಂದುಕೊಂಡರೊ.  ಇಂಥ ವಿಷಯಗಳಲ್ಲಿ ಹೆಂಗಸಿನದೇ ತಪ್ಪಾಗಿ ಎಣಿಸಲ್ಪಡುತ್ತದೆ, ಈ ಕ್ರೂರ ಜಗತ್ತಿನಲಿ! 

ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯಂತೆ, ಸುರಮ್ಯದ ಗಡಿಯಲ್ಲಿ, ಸಾಮಂತ ಸಿಂಹಚೂಡ ಈ ನಾಯಿಯನ್ನೆದುರಿಸಿದಾಗ ನಾನೆಷ್ಟು ದೇವರನ್ನು ಬೇಡಿದ್ದೆ.  ಆತನ ಧೀರನಡೆ, ನುಡಿ ನನ್ನ ಮನದಲ್ಲೊಂದಿಷ್ಟು ಆಸೆ ಮೂಡಿತ್ತು.  ಆದರೆ ಇಲ್ಲಿಯೂ ಕತ್ತಲೆಯ ಕೈ ಬಲವಾಯಿತು.  ‘ಸಿಂಹಚೂಡನಿಗೆ ಸದ್ಗತಿ ದೊರೆಯಲಿ’ ಎಂದು ಪ್ರಾರ್ಥಿಸುವದನ್ನು ಬಿಟ್ಟರೆ ಬೇರೇನನ್ನು ಮಾಡಲಾಗದ ಅಸಹಾಯಕ ಸ್ಥಿತಿ ನನ್ನದು. 

ನಾನಿಷ್ಟು ಹಠ ಮಾಡುತ್ತಿದ್ದರೂ ಈ ಪಾಪಿಗೇಕೆ ಅರ್ಥವಾಗುತ್ತಿಲ್ಲ.  ‘ಜನ್ಮಜನ್ಮಾಂತರದಲ್ಲಿಯೂ, ಇಹಪರದಲ್ಲಿಯೂ ಪತಿ ವಸುಷೇಣನೇ ನನ್ನ ಬದುಕು, ನನ್ನ ಸಾವು ಮತ್ತು ನನ್ನ ಚಿತೆಗೊಡೆಯ’ ಎಂದು.

* * *

ಸೃಷ್ಟಿ, ಈಗ ಅರ್ಥವಾಯಿತೆ? ನೀನೆಷ್ಟು ಘೋರಕತ್ತಲನ್ನು ಸೃಷ್ಟಿಸಿದ್ದೀಯ ಎಂದು.  ಈ ತರದ ಘಟನೆಗಳು ಲೆಕ್ಕವಿಲ್ಲದಷ್ಟು ಪ್ರತಿದಿನ, ಪ್ರತಿದೇಶದಲ್ಲಿಯೂ ನಡೆಯುತ್ತಿವೆ.  ಆದರೂ ಜನ ‘ಕಾಲ ಕೆಟ್ಟುಹೋಯಿತು’ ಎಂದು ಬೊಬ್ಬೆ ಹೊಡೆಯುತ್ತಾರೆ! ಇರಲಿ ಬಿಡು. ನಾವಿದಕ್ಕೆ ಉತ್ತರ ಹೇಳಬೇಕಾಗಿಲ್ಲ. ಅವರ ಮಾತಿನಲ್ಲೇ ಹೇಳುವುದಾದರೆ ‘ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ.’  ನಾವು ನಮ್ಮ ನಮ್ಮ ಕರ್ಮಗಳನ್ನು ಮಾಡೋಣ. ಫಲಾಫಲಗಳನ್ನು ‘ಆತ’ನಿಗೆ ಬಿಟ್ಟುಬಿಡೋಣ.

ಹೊ, ಯುದ್ಧದ ಕಹಳೆಯ ಸದ್ದು.  ಯುದ್ಧ ಮೊದಲಿಟ್ಟಿತೋ ಏನೊ.   ಆದರೆ ಅಲ್ಲಿ ನೋಡಲ್ಲಿ, ಈ ಚಂಡಶಾಸನನು ಸುನಂದೆಯತ್ತ ಹೋಗುತ್ತಿದ್ದಾನೆ.  ನಡೆ, ಏನು ನಡೆಯುತ್ತಿದೆ ಎಂದು ನೋಡೋಣ.

* * *

ದೇವಿ ಸುನಂದೆ, ಇಂದು ಕಡೆಯ ದಿನ. ನಿನಗಾಗಿ ನನ್ನ ಹೆಸರು, ಕೀರ್ತಿ, ರಾಜ್ಯ, ಸತಿಯರು, ಇಹಪರ ಸರ್ವಸ್ವವನ್ನೂ ತೊರೆಯಲು ನಾನು ಸಿದ್ಧನಾಗಿದ್ದೇನೆ.  ನಿನ್ನ ಸಾವು ಕೂಡಾ ವಸುಷೇಣನದೆಂದೆ.  ಆದರೆ ನಾನು ಬಿಡುವುದಿಲ್ಲ, ನಿನ್ನನ್ನು ಸಾಯಲು ಅವನೊಡನೆ.  ನೀನು ಸತ್ತರೆ ನಾನೂ ಸಾಯುತ್ತೇನೆ.  ಆದರೆ ನೀನು ಸಾಯಬಾರದು.  ನೀನು ನನ್ನ ಮನೆಯಲ್ಲಿದ್ದೀಯ ಎಂಬುದಷ್ಟೇ ನನಗೆ ಸಾಕು.  ಬೇರಾವ ಸತಿಯೂ, ಸುಖವೂ ನನಗೆ ಬೇಡ. ಇದೋ ಯುದ್ಧಕ್ಕೆ ಹೊರಟೆ. ನಾನೀಗ ಹಿಂದಕ್ಕೆ ಬರುವುದಿರಲಿ ತಿರುಗಿ ನೋಡದಷ್ಟು ದೂರ ಬಂದುಬಿಟ್ಟಿದ್ದೇನೆ.  ಇಂದು ನಿರ್ಧಾರದ ದಿನ. ವಸು, ಇಲ್ಲ ಚಂಡ.

* * *

ನೋಡಿದೆಯಾ ಸೃಷ್ಟಿ. ಈ ಹುಂಬನನ್ನು. ಕಾಮದ ಹುಚ್ಚಿನಿಂದ ಏನೇನೋ ಬಡಬಡಿಸಿದ. ಸುನಂದೆಯನ್ನು ಆಗಲೇ ತನ್ನ ಹೆಂಡತಿಯೆಂದು ಬಗೆದಿದ್ದಾನೆ.   ದೇವಿ ಎಂದು ಸಂಬೋದಿಸುತ್ತಿದ್ದಾನೆ.  ಆದರೆ ಅವಳು ಮಣಿಯಲಾರಳು ಎಂಬ ಹತಾಶೆಯೂ ಅವನಲ್ಲಿದೆ ಅಲ್ಲವೆ? ಅಲ್ಲಿ ನೋಡಲ್ಲಿ.  ಯುದ್ಧ ಪ್ರಖರವಾಗುತ್ತಿದೆ.   ನಡೆ ನಾವಲ್ಲಿಯೇ ನಿಂತು ಗಮನಿಸುವ.

ಸಹೋದರಿ, ಅಲ್ಲೇನೊ ನಡೆಯುತ್ತಿದೆ. ಕೇಳಿಸುತ್ತಿದೆಯೆ? ಅರಮನೆಯ ಹೊರಬಾಗಿಲ ಬಳಿ ಗದ್ದಲ! ನೋಡು ಅದು ಸುರಮ್ಯ ದೇಶದ ಪತಾಕೆಯಲ್ಲವೆ?  ನೋಡಿದೆಯಾ ವಸುಷೇಣನನ್ನು, ಬಾರ್ಯೆ, ಮಿತ್ರನಿಂದ ಅಪಹೃತಳಾದ ಸುದ್ದಿಯನ್ನು ತಿಳಿದು, ತುತ್ತನ್ನು ಎತ್ತದೆ ಬಂದು ಗುರಿಯನ್ನು ತಲಪುತ್ತಿದ್ದಾನೆ.

ಅರಮನೆಯ ಒಳಗೆಲ್ಲಾ ವಸುಷೇಣ ಸತ್ತನೆಂದು ಸುದ್ದಿ ಹರಡಿದೆ.  ಅಲ್ಲಿ ಹೊರಗೆ ಆತ ಇನ್ನೂ ಯುದ್ಧ ಮಾಡುತ್ತಲೇ ಇದ್ದಾನೆ!  ಇತ್ತ ನೋಡು, ಆ ಚಂಡಶಾಸನ ಸುನಂದೆಯತ್ತ ಹೋಗುತ್ತಿದ್ದಾನೆ. ಓ! ನಿಂತು ಅದೇನು ನಡೆಸಿದ್ದಾನೆ ಈ ಚಂಡಶಾಸನ? ಮಾಯೆಯಿಂದ ರಕ್ತಸಿಕ್ತವಾದ ತಲೆಯೊಂದನ್ನು ಸೃಷ್ಟಿಸಿದ್ದಾನೆ! ಅದೂ ವಸುಷೇಣನದು! ಮಾಯಾವಿ. ಈಗ ಅರ್ಥವಾಯಿತೆ ಸೃಷ್ಟಿ ಈ ಖಳನ ಉದ್ದೇಶ. ಗಾಬರಿಯಾಗಬೇಡ. ನಿನ್ನ ಗರ್ಭಸಂಜಾತನೊಬ್ಬನ ಕುಟಿಲಬುದ್ಧಿಯನ್ನು ಕಂಡು. ಸೋಲು ಖಚಿತವಾದಾಗ ಮನುಷ್ಯ ಈ ರೀತಿ ಅಡ್ಡದಾರಿಗಿಳಿಯುತ್ತಾನೆ.  ಮೋಸದಿಂದಲಾದರೂ ಸರಿ ಸುನಂದೆಯನ್ನು ಕೂಡುವ ಹಂಬಲ ಈ ಮೂಢನಿಗೆ.  ಎಲ್ಲ ಕಾಲಕ್ಕೂ ಈ ಗಂಡಸು ಹೆಂಗಸಿನ ಮನಸ್ಸನ್ನು ಅರ್ಥಮಾಡಿಕೊಳ್ಳದೆ ಅನಾಹುತಕ್ಕೆಡೆಮಾಡಿಕೊಟ್ಟಿದ್ದಾನೆ.  ಮಾಯಾಶಿರಸ್ಸನ್ನು ತೋರಿಸಿ ವಸು ಸತ್ತನೆಂದು ಸುನಂದೆಯನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾನೆ, ನೋಡಲ್ಲಿ.

* * *

ಅಯ್ಯೋ, ದುರ್ವಿಧಿಯೆ. ಕೊನೆಗೂ ಪಾಪಿಯ ಕೈಯೇ ಬಲವಾಯಿತಲ್ಲ. ಅಳಿದುಳಿದಿದ್ದ ಬೆಳಕಿಗೂ ಕತ್ತಲು ತುಂಬಿಕೊಂಡಿತಲ್ಲ.  ಪಾಪಿ, ನನ್ನ ದೇವರ ತಲೆ ಕಡಿದರೆ ನನ್ನನ್ನು ಒಲಿಸಿಕೊಳ್ಳಬಹುದೆಂದು ನೀನು ತಪಾಗಿ ತಿಳಿದಿದ್ದೀಯ.  ಆದರೆ ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... .

ಅಯ್ಯೋ, ದೇವಿ ಸುನಂದೆ. ನಾನೊಂದು ಬಗೆದರೆ, ದೈವವೊಂದು ಬಗೆಯಿತು! ಕಾಮಾತುರನಾಗಿ ನಾನು ದಹಿಸುತ್ತಿದ್ದರೆ, ವಿಧಿ ಮಾಡಿದ್ದನ್ನುಣ್ಣುವವರು ಯಾರು? ನನ್ನ ಮುನ್ನಿನ ಸತಿಯರನ್ನು ತೊರೆದು, ನಿನ್ನನ್ನೇ ನನ್ನ ಸತಿಯೆಂದು ಭಾವಿಸಿದೆ! ಆದರೆ ನೀನದಕ್ಕೆ ಸ್ವಲ್ಪವೂ ಅವಕಾಶ ಕೊಡಲಿಲ್ಲ.  ಈ ಮೈಯೊಳಗಿಲ್ಲವಾದರೇನಂತೆ? ಮರುಮೈಯೊಳಗಾದರೂ ನಿನ್ನನ್ನು ಕೂಡದೆ ಬಿಡುವುದಿಲ್ಲ.  ನಾನೂ ನಿನ್ನ ಚಿತೆಯನ್ನೇರುತ್ತೇನೆ.  ನಿನ್ನ ಚಿತೆಗೊಡೆಯ ವಸುಷೇಣನಲ್ಲ! ಚಂಡಶಾಸನ!

* * *

ನೊಡಿದಿರಾ, ಸಹೃದಯರೆ ಈ ವಿಚಿತ್ರವನ್ನು! ಜನ್ಮಜನ್ಮಾಂತರಗಳಲ್ಲಿ, ಇಹಪರದಲ್ಲಿ ವಸುಷೇಣನೇ ನನ್ನ ಬದುಕು, ವಸುಷೇಣನೇ ನನ್ನ ಸಾವು, ವಸುಷೇಣನೇ ನನ್ನ ಚಿತೆಗೊಡೆಯ... ಎಂದು ಮೊರೆಯಿಡುತ್ತಿದ್ದಳು.  ಸುನಂದೆಯ ಕೊನೆಯ ಮಾತನ್ನು ಸುಳ್ಳಾಗಿಸಿಬಿಟ್ಟಿತಲ್ಲ ಈ ವಿಧಿ!  ಶಾಸನ ಮಾಡುವಾತನೇ ಅದನ್ನು ಮುರಿದು ದುರಂತಕ್ಕೀಡು ಮಾಡಿದ್ದರೂ, ತನ್ನ ಕೊನೆಯ ಮಾತನ್ನೇ ನಡೆಸಿಕೊಂಡುಬಿಟ್ಟ, ಬಲವಂತವಾಗಿಯಾದರು. ಇದು ವೈಯಕ್ತಿಕ ದುರಂತ ಮಾತ್ರವಲ್ಲ, ಸಮೂಹಿಕ ದುರಂತ! ಅಂತಃಪುರದ ಸ್ತ್ರೀಯರು, ಲೆಂಕರು ಚಂಡಶಾಸನನ ಹಿಂದೆಯೇ ಸಾಲುಸಾಲಾಗಿ ಚಿತೆಯೇರಿದರು.  ಸುನಂದೆಯನ್ನು ಹೊತ್ತು ತಂದಾಗ, ತಮ್ಮರಸನ ಅವಿವೇಕತನಕ್ಕೆ ದೂಷಿಸಿದ್ದ ಪುರಜನರೂ ದುಃಖಪಟ್ಟರು.  ಹೆಣ್ಣಿನ ಜೊತೆ ಚಿತೆಯೇರಿದ ಮೊದಲ ಪುರುಷನೀತ!!!

ಸಹೃದಯರೆ, ಈ ಪ್ರಪಂಚದಲ್ಲಿ ಒಳಿತು ಕೆಡಕುಗಳೆರಡೂ ಸಮವಾಗಿರುತ್ತವೆ.  ಸಮವಾಗಿರಲೇಬೇಕು.  ಅವುಗಳಲ್ಲಿ ಕೆಡಕು ಒಂದಿಷ್ಟು ಹೆಚ್ಚಾದರೂ, ಸೃಷ್ಟಿಯ ಉತ್ಪಾದಕ ಸಾಮರ್ಥ್ಯ ಮತ್ತು ನನ್ನ ತಾಳುವಿಕೆಯ ಸಾಮರ್ಥ್ಯದಲ್ಲಿ ಹೆಚ್ಚುಕಡಿಮೆಯಾದಾಗ ಉಂಟಾಗುವ ಅನಾಹುತವೇ ಆಗುತ್ತದೆ.  ಅದರ ಪರಿಣಾಮವನ್ನು ಮಾತ್ರ ಈ ವ್ಯವಸ್ಥೆ ತಾಳಲಾರದು.  

ಸೃಷ್ಟಿ, ಈ ಮನುಷ್ಯ ಯಾವುದಾದರು ಒಂದು ವಿಷಯದಲ್ಲಿ ಉನ್ನತಿ ಸಾಧಿಸಿದರೆ ಸಾಕು, ಸಮಷ್ಟಿಯನ್ನು ಮರೆತುಬಿಡುತ್ತಾನೆ.  ಸಮಷ್ಟಿಯುನ್ನತಿಯೊಂದಿಗೇ ತನ್ನುನ್ನತಿಯೆಂಬದನ್ನು ಮರೆತುಬಿಡುತ್ತಾನೆ.  ಮನುಷ್ಯರು ನಮ್ಮನ್ನು ಮರೆತಾಗಲೆಲ್ಲಾ, ನಾವು ನಮ್ಮ ಇರುವನ್ನು ಅವರ ಅರಿವಿಗೆ ತರಲೇಬೇಕು.  ಇದನ್ನು ನಾನು ನಿನಗೆ ಹೇಳಬೇಕೆ? ನೀನೆಷ್ಟು ಸುಂದರಳೊ, ಸೌಮ್ಯಳೊ, ಒಳ್ಳೆಯವಳೊ ಅಷ್ಟೇ ರೌದ್ರಭಯಂಕರಳೂ ಎಂಬುದಕ್ಕೆ ನೀನು ಇತ್ತೀಚಿಗೆ ಪ್ರಸವಿಸಿದ ಭೂಕಂಪವೇ ಸಾಕ್ಷಿ !!!

2. ಸಮವಸ್ತ್ರ

ಕೈಯಲ್ಲಿ ತಿಂಡಿ ಹಿಡಿದು ಅಡುಗೆ ಮನೆಯಿಂದ ರಾಜಮ್ಮ ಗೊಣುಗುತ್ತಲೆ ಹೊರಬಂದರು. ‘ಇವತ್ತೆ ಕಾಲೇಜು ಓಪನ್ನು. ಮೊದಲ ದಿನವೆ ಲೇಟಾಗೋದ್ರೆ ಏನ್ ಚಂದ?’ ಎಂದು. ‘ಶಮಿ. ಶಮಿ. ಬೇಗ ಬಾರೆ. ತಿಂಡಿ ತಣ್ಣಗಾಗುತ್ತೆ. ಈಗ್ಲೆ ಲೇಟಾಗಿದೆ. ನೀನಿನ್ನು ರೆಡಿಯಾಗಿಲ್ಲ’ ಎಂದರು. ರೂಮಿನಿಂದ ಏನೂ ಪ್ರತಿಕ್ರಿಯೆ ಬರದಿದ್ದಾಗ ತಾವೆ ಒಳ ಹೋಗಿ ನೋಡಿದರು. ಶಮಿ ಅಲ್ಲಿರಲಿಲ್ಲ. ಆಶ್ಚರ್ಯದಿಂದ ‘ಇವಳೆಲ್ಲಿ ಹೋದಳೊ!’ ಎಂದುಕೊಂಡು ಹೊರ ಬರುತಿದ್ದವರಿಗೆ ಕಂಡಿದ್ದು, ಮನೆಯ ಹೊರಗಿನಿಂದ ಒಳ ಬರುತಿದ್ದ ಮಗಳು ಶಮಿ. ಆಗಲೆ ಸಿದ್ದಳಾಗಿ ಕೈಯಲ್ಲಿ ನೋಟ್ ಬುಕ್ ಹಿಡಿದು ನಿಂತಿದ್ದಳು. ಮಗಳ ಸರಳವಾದ ಅಲಂಕಾರ, ಅವಳ ಎತ್ತರವನ್ನು ಗಮನಿಸಿದ ರಾಜಮ್ಮ ‘ಹೆಣ್ಣು ಮಕ್ಕಳು ಅದೆಷ್ಟು ಬೇಗ ಬೆಳೆಯುತ್ತವೊ’ ಎಂದುಕೊಂಡು, ‘ಶಮಿ ನೀನು ಇನ್ನು ತಿಂಡಿ ತಿಂದಿಲ್ಲ. ನಿಮ್ಮಪ್ಪ ಆಗಲೆ ರೆಡಿಯಾಗಿ ಕಾಯ್ತಿದಾರೆ. ಬೇಗ ತಿನ್ನು.’ ಎಂದು ತಟ್ಟೆಯನ್ನು ಅವಳ ಕೈಗಿತ್ತರು. ‘ನನಗೆ ಹಸಿವೆ ಇಲ್ಲಮ್ಮ. ನೀನು ನೋಡಿದರೆ ಇಷ್ಟೊಂದು ತಿಂಡಿ ಹಾಕಿದ್ದಿಯ’ ಎಂದು ಮುಕ್ಕಾಲು ಭಾಗದಷ್ಟು ತಿಂಡಿಯನ್ನು ತಟ್ಟೆಯಲ್ಲಿಯೆ ಒಂದು ಕಡೆ ತಳ್ಳಿ, ಮಿಕ್ಕಿದ್ದನ್ನು ನಾಲ್ಕೆ ತುತ್ತಿಗೆ ತಿಂದ ಮಗಳನ್ನು ನೋಡುತ್ತಲೆ ನಿಂತಿದ್ದ ರಾಜಮ್ಮ, ಮಗಳು ‘ತಟ್ಟೆ ತಗೊಳಮ್ಮ’ ಎಂದಾಗ ಎಚ್ಚೆತ್ತು ‘ಹುಶಾರಾಗಿ ಹೊಗ್ಬಾಮ್ಮ’ ಎಂದು ತಟ್ಟೆ ತಗೆದುಕೊಂಡು ಹೊರಟರು. ‘ಮೊನ್ನೆ ಮೊನ್ನೆಯವರೆಗೂ ಇವಳಿಗೆ ಯೂನಿಫಾರ್ಮ್ ಹಾಕಿ ಸ್ಕೂಲ್ ಬಸ್ಸಿಗೆ ಹತ್ತಿಸುವಷ್ಟರಲ್ಲಿ ಸಾಕುಸಾಕಾಗುತಿತ್ತು. ಇಂದಿನಿಂದ ಅವಳು ಕಾಲೇಜಿಗೆ ಹೋಗುತ್ತಾಳೆ. ಏನು ಖುಷಿನೊ? ಅವಳೆ ಬೇಗ ರೆಡಿಯಾಗಿದಾಳೆ. ಯೂನಿಫಾರ್ಮ್ ಹಾಕ್ಕೊಂಡ್ರೆ ಚಿಕ್ಕ ಹುಡುಗಿ, ಬಣ್ಣದ ಚೂಡಿದಾರ್ ಹಾಕ್ಕೊಂಡ್ರೆ ದೊಡ್ಡ ಹುಡುಗಿ’ ಎಂದು ತಮ್ಮ ಯೋಚನೆಗೆ ತಾವೆ ನಕ್ಕರು ರಾಜಮ್ಮ. ಈಗಾಗಲೆ ತಿಂಡಿ ಮುಗಿಸಿ ಎರಡನೆ ಬಾರಿಗೆ ಪೇಪರ್ ತಿರುವಿ ಹಾಕುತ್ತಿದ್ದ ಶಿವಣ್ಣನಿಗೆ ‘ಅಪ್ಪ ನಾನ್ ರೆಡಿ’ ಎಂದ ಮಗಳ ಕೂಗು ಮೊದಲ ಬಾರಿಗೆ ಕೇಳಿಸಲೇ ಇಲ್ಲ. ‘ಕಾಲೇಜು ತಲುಪಿದರೆ ಸಾಕು ತಿಗ ಊರೋದುಕ್ಕು ಪುರುಸೊತ್ತು ಇರೋದಿಲ್ಲ. ಕಾಲೆಜುಗಳಲ್ಲಿ ಯಾವ ಕೆಲಸ ಬೇಕಾದ್ರು ಮಾಡ್ಬೌಹುದು. ಆದರೆ ಈ ಗುಮಾಸ್ತನ ಕೆಲಸ ಮಾತ್ರ ಮಾಡಕ್ಕಾಗೊಲ್ಲ’ ಎನ್ನುತ್ತಿದ್ದರು ಶಿವಣ್ಣ. ಮಗಳ ಎರಡನೆ ಕೂಗಿಗೆ ಎಚ್ಚೆತ್ತು, ಕೈಯಲ್ಲಿ ಹೆಲ್ಮೆಟ್ ಹಿಡಿದು ಹೊರಟರು. ಮದುವೆಯಲ್ಲಿ ಮಾವ ಕೊಡಿಸಿದ್ದ ಬಜಾಜ್ ಸ್ಕೂಟರ್ ಹಲವಾರು ಮಾರ್ಪಾಟುಗಳನ್ನು ಹೊಂದಿದ್ದರು, ತನ್ನ ಮೂಲ ಸ್ವರೂಪವನ್ನು ಮಾತ್ರ ಉಳಿಸಿಕೊಂಡಿತ್ತು. ಅದನ್ನು ಹೊರತೆಗೆದು, ನಲವತ್ತೈದು ಡಿಗ್ರಿಗೆ ಬಾಗಿಸಿ ಸ್ಟಾರ್ಟ್ ಮಾಡುವದನ್ನು ನೋಡಿದ ಶಮಿ ‘ಅಪ್ಪ ಈ ಹಳೆ ಸ್ಕೂಟರನ್ನು ಮಾರಿ ಒಂದು ಹೊಸದನ್ನು ತಗೊ ಬಾರದೆ?’ ಎಂದಳು. ಒಂದೆರಡು ಒದೆತಕ್ಕು ಜೀವ ತಳೆಯದಿದ್ದ ಸ್ಕೂಟರನ್ನು ಸೊಂಟಕ್ಕೆ ತಾಗಿಸಿಕೊಂಡು ನಿಂತು ‘ಶಮಿ, ನಿಮ್ಮಪ್ಪ ಒಬ್ಬ ಗುಮಾಸ್ತ ಕಣಮ್ಮ. ಅದೂ ಕಾಲೇಜಿನಲ್ಲಿ. ಬರೋದು ಆರೇಳು ಸಾವಿರ ಸಂಬಳ. ಈಗ ನಿನಗೆ ಹದಿನೈದು ಸಾವ್ರ ಡೊನೇಶನ್ ಕೊಡೊ ಹೊತ್ತಿಗೆ ಸಾಕಾಗೋಗಿದೆ. ಇನ್ನು ಮುಂದಿನ ವರ್ಷ ಮತ್ತೆ ಕಟ್ಟೋಕೆ ಹತ್ತು ಸಾವ್ರ ರೆಡಿ ಮಾಡ್ಕೊಬೇಕು. ಅದ್ರೊಳಗೆ ಈ ಸ್ಕೂಟರ್ ಇದೆಲ್ಲ ಆಗೊ ಕೆಲಸ ಅಲ್ಲಮ್ಮ‘ ಎಂದು ಸ್ಕೂಟರ್ ಸ್ಟಾರ್ಟ್ ಮಾಡಿದರು. ವಿಷಯ ತನ್ನ ಕಡೆಗೆ ತಿರುಗಿದ್ದರಿಂದ ಮರುಮಾತನಾಡದೆ ಶಮಿ ಅಪ್ಪನ ಹಿಂದೆ ಸ್ಕೂಟರ್ ಹತ್ತಿದಳು. ಗೇರು ಬದಲಾಯಿಸುತ್ತ ಶಿವಣ್ಣ ಯೋಚಿಸಿದರು. ‘ಯೂನಿಫಾರ್ಮ್ ಕಳಚಿ ಬಣ್ಣದ ಬಟ್ಟೆ ಹಾಕ್ಕೊಳ್ಳದೆ ತಡ, ಈ ಮಕ್ಕಳೂ ಬಣ್ಣದ ಕನಸು ಕಾಣದಿಕ್ಕೆ ಶುರು ಮಾಡುತ್ತವೆ’ ಎಂದು.

* * *

ಮೊದಲ ದಿನ ವೆಲ್ಕಂ ಪಾರ್ಟಿ, ಎರಡನೆ ದಿನ ಫ್ರೆಷರ್ಸ್ ಡೆ ಹೀಗೆ ಕಳೆದು, ಮೂರನೆ ದಿನವೆ ಒಂದಿಷ್ಟು ತರಗತಿಗಳು ಪ್ರಾರಂಭವಾಗಿದ್ದವು. ನಾಲ್ಕನೆ ದಿನ. ಎರಡು ಪೀರಿಯಡ್ಡು ಕಳೆದ ನಂತರ ಇದ್ದ ಅರ್ಧ ಗಂಟೆ ವಿರಾಮದಲ್ಲಿ ಶಮಿಯೊಬ್ಬಳೆ ಬಾಗಿಲ ಬಳಿ ನಿಂತಿದ್ದಳು. ಆಗ ಅವಳ ಮುಂದೆ ನಾಲ್ಕು ಜನ ಹುಡುಗರು ಬಂದು ನಿಂತು ಮಾತನಾಡಿಸಿದರು. ‘ಹಲೊ ಫ್ರೆಂಡ್, ನಾನು ರಾಕೇಶ್. ಇವನು ಪರೇಶ್, ರಾಜು, ವಿಕ್ಕಿ. ನಾವೆಲ್ಲ ಸೆಕೆಂಡಿಯರ್ ಸ್ಟೂಡೆಂಟ್ಸ್. ನಿಮ್ಮ ಹೆಸರು ಶಮಿ. ಸರಿ ತಾನೆ?’ ಎಂದು ಕೈ ನೀಡಿದ. ವೆಲ್ಕಂ ಪಾರ್ಟಿಯಲ್ಲಿ ಮೂಳೆ ಇಲ್ಲದವನಂತೆ ಡ್ಯಾನ್ಸ್ ಮಾಡಿದ್ದ ರಾಕೇಶನನ್ನು ಶಮಿ ನೋಡಿದ್ದಳು. ಹುಡುಗರೆಲ್ಲ ‘ಹೋ’ ಎಂದು ಚಪ್ಪಾಳೆ ತಟ್ಟಿ ಕೂಗುತ್ತಿದ್ದರೆ, ಮನಸ್ಸಿನಲ್ಲೆ ಅವನೊಂದಿಗೆ ನರ್ತಿಸುತ್ತಿದ್ದ ಶಮಿ ‘ಎಷ್ಟೊಂದು ಚೆನಾಗಿದಾನೆ’ ಅಂದು ಕೊಂಡಿದ್ದಳು. ಈಗ ಅವನಾಗೆ ಬಂದು ಮಾತನಾಡಿಸುತ್ತಿದ್ದರೆ ಅವಳ ಮೈಯಲ್ಲಿ ಸಣ್ಣಗೆ ಕಂಪನ ಶುರುವಾಗಿಬಿಟ್ಟಿತ್ತು. ಅವನು ನೀಡಿದ್ದ ಕೈಯಿಗೆ ತಾನು ಕೈ ನೀಡಲು ಸ್ವಲ್ಪ ಆತಂಕವೆನಿಸಿದರೂ ತೋರಿಸದೆ ‘ಹಲೊ’ ಎಂದು ಕೈ ನೀಡಿದಳು. ಆತ ಸ್ವಲ್ಪ ಬಿಗಿಯಾಗಿಯೆ ಹಿಡಿದು ಕುಲುಕಿದ. ಬೇರೆಯವರೆಲ್ಲ ಅವನನ್ನೆ ಅನುಸರಿಸಿದರು. ನಾಲ್ಕು ಜನರ ಕೈ ಕುಲುಕುವಷ್ಟರಲ್ಲಿ ಕೈ ಕೆಂಪಗಾಗಿ ಬಿಟ್ಟಿತ್ತು. ಮುಖವೂ ಕೂಡ. ಕ್ಲಾಸ್ ಬೆಲ್ಲಾಗುವವರಗೆ ಅವರ ಮಾತುಕಥೆ ಸಾಗಿತ್ತು. ಇಂತಹುದೇ ವಿಷಯ ಎಂದೇನಿರಲಿಲ್ಲ. ಸಿನಿಮಾ, ಕ್ರಿಕೆಟ್, ಇಂಟರ್‌ನೆಟ್ ಹೀಗೆ ಬದಲಾಗುತಿತ್ತು. ಬೆಲ್ಲಾದಾಗ ಮತ್ತೊಮ್ಮೆ ಎಲ್ಲರ ಕೈಯನ್ನು ಮುಟ್ಟಿದಂತೆ ಮಾಡಿ ಕ್ಲಾಸಿಗೆ ಬಂದ ಶಮಿಗೆ ಸ್ವಲ್ಪ ಹೊತ್ತು ಕ್ಲಾಸ್ ರೂಂ, ಪಕ್ಕ ಕುಳಿತಿದ್ದ ಹುಡುಗರು ಎಲ್ಲ ಮರೆಯಾಗಿ ರಾಕೇಶನೊಬ್ಬನೆ ಕಾಣುತ್ತಿದ್ದ.

* * *

ಎರಡನೆ ಪಿರಿಯಡ್ಡು ಮುಗಿಯಲು ಇನ್ನು ಐದು ನಿಮಿಷಗಳಿವೆ ಎನ್ನುವಾಗಲೆ ರಾಕೇಶ್ ಅಂಡ್ ಕೊ ಬಾಗಿಲ ಬಳಿ ಠಳಾಯಿಸುತ್ತಿದ್ದರು. ಅದನ್ನು ಕಂಡ ಶಮಿ ‘ನೆನ್ನೆಯಷ್ಟೆ ಪರಿಚಯವಾದ ಅವರು ನನಗಾಗೆ ಕಾಯುತ್ತಿದ್ದಾರೆ’ ಎಂಬ ಯೋಚನೆಯಿಂದಲೇ ಮೈ ಬಿಸಿಯೆನಿಸಿತು. ಹೊರಬಂದ ತಕ್ಷಣ ಮತ್ತದೆ ಕೈ ಕುಲುಕಾಟ. ನೆನ್ನೆ ಮಾತನಾಡಿದ ವಿಷಯಗಳೆ. ಯಾರಿಗೂ ಬೇಸರವಿಲ್ಲ. ಮಾತು ನಗು, ನಗು ಮಾತು ಇವುಗಳ ನಡುವೆ ಶಮಿ ಗಮನಿಸಿದಳು. ರಾಕೇಶ್ ಶಮಿಯ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಿದ್ದ. ವಿಕ್ಕಿ ಮತ್ತು ಪರೇಶ್ ಇಬ್ಬರೂ ಶಮಿಯ ಮೈಗೆ ತಾಕುವಷ್ಟು ಹತ್ತಿರ ನಿಂತಿದ್ದರು. ರಾಜು ಕೂಡ ಅಷ್ಟೆ. ಆಗಾಗ ಶಮಿಯ ಭುಜದ ಮೇಲೆ ಹೊಡೆಯುತಿದ್ದ. ಅವರ ಮನೆಯ ವಾತಾವರಣ, ಅವಳ ತಾಯಿ ತಂದೆ ಇವರು ರೂಪಿಸಿದ್ದ ಸಂಸ್ಕಾರವುಳ್ಳ ಮನಸ್ಸು ‘ಯಾರಾದರು ನೋಡಿದರೆ’ ಎಂದು ಒಂದು ಕ್ಷಣ ಆತಂಕಗೊಂಡಿತು. ಆದರೆ ಅವಳಿದ್ದ ಪರಿಸರ, ಸಮಾಜದಿಂದ ರೂಪ ಪಡೆದಿದ್ದ ಮನಸ್ಸು ‘ನೋಡಿದರೇನು? ನಾವೇನು ತಪ್ಪು ಮಾಡುತ್ತಿಲ್ಲವಲ್ಲ’ ಎಂದು ಸಮಾಧಾನ ಪಟ್ಟುಕೊಂಡಿತು. ಕ್ಲಾಸ್ ಮುಗಿದ ಮೇಲೆ ಪಿಚ್ಚರಿಗೆ ಹೋಗುವ ಮಾತನ್ನು ವಿಷಯವನ್ನು ರಾಕೇಶ್ ಎತ್ತಿದಾಗ ಶಮಿ ‘ಸಾರಿ ಫ್ರೆಂಡ್ಸ್. ನಾನಿವತ್ತು ಮನೆಯಲ್ಲಿ ಹೇಳಿ ಬಂದಿಲ್ಲ. ನಾಳೆ ಬೇಕಾದರೆ ಹೋಗೋಣ’ ಎಂದಳು. ಅದಕ್ಕೆ ಎಲ್ಲರ ಒಪ್ಪಿಗೆಯೂ ಬಿತ್ತು.

* * *

ಮೂರು ಬೈಕುಗಳಲ್ಲಿ ಪಿಚ್ಚರಿಗೆ ಹೊರಟ ಆರು ಜನರಲ್ಲಿ ಸೆಕೆಂಡಿಯರಿನ ರೋಹಿಣಿಯೂ ಸೇರಿದ್ದಳು. ಅವಳ ಪರಿಚಯವಾಗಿ, ಅವಳು ಸಿನಿಮಾಕ್ಕೆ ಬರುತ್ತಾಳೆ ಎಂದಾಗ ತುಸು ಸಮಾಧಾನವಾಯಿತಾದರು, ಅವಳು ತನ್ನ ಸ್ಕೂಟಿಯನ್ನು ಅಲ್ಲೆ ನಿಲ್ಲಿಸಿ ಪರೇಶನ ಬೈಕ್ ಹತ್ತಿದಾಗ ಹೊಟ್ಟೆಯೊಳಗೆ ಸಣ್ಣಗೆ ನಡುಕವುಂಟಾಯಿತು. ಬೇರೆ ದಾರಿ ಕಾಣದೆ ರಾಕೇಶನ ಬುಲ್ಲೆಟ್ ಹತ್ತಿ ಅವನಿಗೆ ತಗುಲಿಸಿಕೊಳ್ಳದಂತೆ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಬುಲ್ಲೆಟ್ ವೇಗ ಹೆಚ್ಚಾದಂತೆ ಅವಳ ಮನಸ್ಸಿನ ಆತಂಕ ಕಡೆಮೆಯಾಗುತ್ತಾ ಹೋಗಿ ಅವರಿಬ್ಬರ ನಡುವಿನ ಅಂತರವೂ ಕಡಿಮೆಯಾಯಿತು. ಹೆಚ್ಚಿದ್ದ ವೇಗ, ಆಗಾಗ ಸಡನ್ನಾಗಿ ಬ್ರೇಕು ಹಾಕುತ್ತಿದ್ದರಿಂದ ಉಂಟಾಗುತ್ತಿದ್ದ ಅವನ ಸ್ಪರ್ಶ ಇಷ್ಟವಾಗತೊಡಗಿ ‘ಭಯಪಡುವಂತದ್ದೇನಿಲ್ಲ’ ಎಂದುಕೊಂಡಳು. ಪರ್ಸನಲ್ಲಿ ಕೇವಲ ಹತ್ತೇ ರೂಪಾಯಿ ಇರುವದನ್ನು ನೆನೆದು ಮತ್ತೊಮ್ಮೆ ಆತಂಕಗೊಂಡಳಾದರು, ರಾಕೇಶನೆ ಎಲ್ಲರಿಗು ಟಿಕೆಟ್ ತಂದಾಗ ಸಮಾಧಾನಗೊಂಡಳು. ಒಳಗೆ ವಿಕ್ಕಿಯ ಪಕ್ಕದಲ್ಲಿ ಕುಳಿತಿದ್ದ ರೋಹಿಣಿಯ ಪಕ್ಕದಲ್ಲಿ ತಾನು ಕುಳಿತುಕೊಳ್ಳಬೇಕೆಂದು ಯೋಚಿಸುತ್ತಿರುವಾಗಲೆ ರಾಕೇಶ್ ಅಲ್ಲಿ ಕುಳಿತು ‘ಕಮಾನ್ ಶಮಿ’ ಎಂದು ಕೈ ಹಿಡಿದು ಶಮಿಯನ್ನು ಪಕ್ಕಕ್ಕೆ ಕೂರಿಸಿಕೊಂಡ. ಇನ್ನೊಂದು ಪಕ್ಕಕ್ಕೆ ಪರೇಶ್, ರಾಜು ಕುಳಿತುಕೊಂಡರು. ಸಿನಿಮ ಶುರುವಾಯಿತು.

* * *

ಅಂದಿನಿಂದ ಶಮಿಗೆ ಬಣ್ಣದ ಕನಸುಗಳ ಕಾಟ ಶುರುವಾಯಿತು. ಮನೆಯಲ್ಲಿದ್ದರೂ ರಾಕೇಶನದೆ ಕನಸು. ಸಿನಿಮಾ ಮಂದಿರದ ಕತ್ತಲಿನಲ್ಲಿ ಅವನು ಸಣ್ಣಗೆ ಪಿಸುಗುಟ್ಟುತ್ತಿದ್ದಾಗ ತಾಗುತ್ತಿದ್ದ ಬಿಸಿಯುಸಿರಿನ ನೆನಪು ಮನೆಯಲ್ಲಿಯೂ ಅವಳ ಮೈಯನ್ನು ಬಿಸಿಯಾಗಿಸುತಿತ್ತು. ತಿಂಗಳೆರಡು ಕಳೆಯುವದರಲ್ಲಿ ಅವರೆಲ್ಲ ಹತ್ತು ಬಾರಿ ಸಿನಿಮಾ ಯಾತ್ರೆ ಮಾಡಿ ಬಂದಿದ್ದರು. ನೆನ್ನೆಯೆ ತೀರ್ಮಾನವಾಗಿದ್ದ ಹಾಗೆ ಇಂದು ಕ್ಲಾಸಿಗೆ ಚಕ್ಕರ್ ಹೊಡೆದು ಹೊಸದಾಗಿ ಬಂದಿದ್ದ ಹಿಂದಿ ಪಿಚ್ಚರಿಗೆ ಹೋಗಬೇಕಾಗಿತ್ತು. ಏಕೊ? ಶಮಿಗೆ ಬೆಳಿಗ್ಗೆಯಿಂದ ಒಂದು ರೀತಿಯ ಅನ್ಯಮನಸ್ಕತೆ. ಅದು ಅವಳು ಬಂದಿದ್ದ ರೀತಿಯಲ್ಲೂ ವ್ಯಕ್ತವಾಗುತಿತ್ತು. ಒಂದು ರೀತಿಯಲ್ಲಿ ಮೈ ಮನಸುಗಳೆರಡೂ ಅಸ್ತವ್ಯಸ್ತವಾಗಿದ್ದವು. ಅಂದು ರೋಹಿಣಿ ಬರದೇ ಇರುವುದನ್ನು ಗಮನಿಸಿದಾಗ ಇನ್ನೂ ಬೇಸರವಾಗಿ ‘ರಾಕೇಶ್ ಇವತ್ತು ಪ್ರೋಗ್ರಾಮ್ ಕ್ಯಾನ್ಸಲ್ ಮಾಡೋಣ. ನಾಳೆ ಹೋಗೋಣ’ ಎಂದಳು. ‘ನೋ ನೊ ಶಮಿ. ಈಗಾಗಲೆ ಟಿಕೆಟ್ ರಿಸರ್ವ್ ಮಾಡಿಸಿ ಹಾಗಿದೆ. ಇವತ್ತೆ ಹೋಗಬೇಕು’ ಎಂದು ಬುಲ್ಲೆಟ್ ಸ್ಟಾರ್ಟ್ ಮಾಡಿದ. ಶಮಿ

Imprint

Publisher: BookRix GmbH & Co. KG Sonnenstraße 23 80331 Munich Germany

Text Copyright Holder: Satyanarayana
Proofreading and Editing by: Satyanarayana
Release Date: 08-05-2014
ISBN: 978-3-7368-3000-4

All Rights Reserved

Dedication:
ಬಾಲ್ಯದಲ್ಲಿ ನಮ್ಮ ತುಂಟಾಟಗಳನ್ನು ಅನುಭವಿಸುತ್ತಾ, ಕೀಟಲೆ ಮಾಡಿದಾಗ, ಸಾವಿರ ಬಾರಿಯಾದರೂ ಹೊಡೆಯಲು ಕೈ ಎತ್ತಿ, ಆದರೆ ಒಂದು ಬಾರಿಯೂ ಹೊಡೆಯದ, ೂರಿನವರಿಂದ ಬಂಧು-ಮಿತ್ರರಿಂದ ಧರ್ಮರಾಯ ಎಂದು ಕರೆಸಿಕೊಂಡಿದ್ದ, ಕಥೆ ಹೇಳುತ್ತಾ ನಮ್ಮ ಬಾಲಗ್ಯವನ್ನು ಬೆಳಗಿದ ನನ್ನ ಪ್ರೀತಿಯ ಅಜ್ಜ ಶ್ರೀ ಸಣ್ಣತಿಮ್ಮೇಗೌಡ ಅವರ ಸವಿನೆನಪಿಗೆ ಈ ಮುಡಿ ಮುಡುಪು

Next Page
Page 1 /